ಜುಲೈ ತಿಂಗಳಲ್ಲಿ ಭಾರಿ ಮಳೆಯ ಹೊರತಾಗಿಯೂ ಒಣಗಿದ ಸ್ಥಿತಿಯಲ್ಲಿರುವ ರಾಜ್ಯದ 478 ಕೆರೆಗಳು

Update: 2023-08-03 12:57 GMT

ಸಾಂದರ್ಭಿಕ ಚಿತ್ರ (Credit: thehindu.com)

ಬೆಂಗಳೂರು: ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿರುವ ಹೊರತಾಗಿಯೂ ಒಣ ಹಾಗೂ ಅರೆ ಒಣ ಪ್ರದೇಶಗಳಲ್ಲಿ ಕೃಷಿ ಹಾಗೂ ಕುಡಿಯುವ ನೀರು ಅವಶ್ಯಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಕಿರು ಕೆರೆಗಳು ಇನ್ನೂ ಭರ್ತಿಯೇ ಆಗಿಲ್ಲವೆಂದು timesofindia.com ವರದಿ ಮಾಡಿದೆ.

3,673 ಕಿರು ಕೃಷಿ ಕೆರೆಗಳ ಪೈಕಿ ಕೇವಲ ಶೇ. 18ರಷ್ಟು ಕೆರೆಗಳು ಮಾತ್ರ ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿದ್ದರೆ, 478 ಕೆರೆಗಳು ಸಂಪೂರ್ಣವಾಗಿ ಒಣಗಿದ ಸ್ಥಿತಿಯಲ್ಲೇ ಇವೆ. ಈ ಪೈಕಿ ಸುಮಾರು 2,534 ಕೆರೆಗಳಲ್ಲಿ ಶೇ. 30-50ರ ನಡುವೆ ಮಾತ್ರ ನೀರು ಭರ್ತಿಯಾಗಿದ್ದರೆ, ಶೇ. 13ರಷ್ಟು ಕೆರೆಗಳು ಸಂಪೂರ್ಣ ಖಾಲಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ರಾಯಚೂರಿನಂಥ ಜಿಲ್ಲೆಗಳಲ್ಲಿ ಪರಿಸ್ಥಿತಿಯು ತುಂಬಾ ವಿಷಮಿಸಿದೆ" ಎಂದು ಕಿರು ನೀರಾವರಿ ಸಚಿವ ಎನ್. ಬೋಸ್ ರಾಜು ಹೇಳಿದ್ದಾರೆ.

ಮಾನ್ಸೂನ್ ಮಾರುತ ಪ್ರವೇಶವು ವಿಳಂಬವಾಗಿದ್ದರಿಂದ ರಾಜ್ಯದಲ್ಲಿ ಜೂನ್ ತಿಂಗಳು ಹಾಗೂ ಜುಲೈ ತಿಂಗಳ ಮೊದಲರ್ಧದಲ್ಲಿ ಶೇ. 23ರಷ್ಟು ಮಳೆ ಕೊರತೆಯುಂಟಾಗಿದೆ. ಆದರೆ, ಜುಲೈ ತಿಂಗಳ ಉತ್ತರಾರ್ಧದಲ್ಲಿ ಭಾರಿ ಮಳೆ ಸುರಿದಿದ್ದರಿಂದ ರಾಜ್ಯವು ವಾಡಿಕೆ ಮಳೆಗಿಂತ ಒಟ್ಟಾರೆ ಶೇ. 3ರಷ್ಟು ಹೆಚ್ಚು ಮಳೆಯನ್ನು ದಾಖಲಿಸಿದೆ.

"ಈ ಅಂಕಿ-ಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ, ಮಾನ್ಸೂನ್ ಮಳೆಯು ಉತ್ತಮ ಸ್ಥಿತಿಯಲ್ಲಿದ್ದಾಗ ಕೆರೆಗಳಲ್ಲಿನ ನೀರಿನ ಮಟ್ಟವು ಅಧಿಕವಾಗಿರಬೇಕಿತ್ತು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ" ಎಂದು ಕಿರು ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಆದರೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ, ಈ ಪ್ರದೇಶಗಳಲ್ಲಿನ ಕೆರೆಗಳು ಬಹುತೇಕ ಒಣಗಿವೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ತಜ್ಞರು ಈ ಏರುಪೇರಿಗೆ ಹಲವಾರು ಕಾರಣಗಳನ್ನು ನೀಡುತ್ತಿದ್ದು, ಈ ಪೈಕಿ ಅಣೆಕಟ್ಟುಗಳಲ್ಲಿನ ಕಳಪೆ ನೀರು ಸಂಗ್ರಹಣಾ ವ್ಯವಸ್ಥೆ ಹಾಗೂ ಭಾರಿ ನೀರಾವರಿ ಯೋಜನೆಗಳು ಮತ್ತು ಕಿರು ಕೆರೆ ಮೂಲಗಳ ನಡುವೆ ಸಮರ್ಪಕ ಸಂಪರ್ಕವಿಲ್ಲದಿರುವುದೂ ಸೇರಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದಲ್ಲದೆ, ಕೆರೆ ಭಾಗದ ನೀರು ಸಂಗ್ರಹಣಾ ಪ್ರದೇಶಗಳನ್ನು ಅತಿಯಾಗಿ ಒತ್ತುವರಿ ಮಾಡಿರುವುದೂ ಈ ಸಮಸ್ಯೆಗೆ ಕಾರಣವೆಂದು ಹೇಳಿರುವ ಅಧಿಕಾರಿಗಳು, ಒತ್ತುವರಿಯಿಂದ ಕೆರೆಗಳಿಗೆ ನೀರು ಸೇರಲು ಅಡ್ಡಿಯಾಗಿರುವುದರಿಂದ ತಕ್ಷಣದ ಪ್ರವಾಹ ಕೂಡಾ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News