ನಾಲ್ಕು ವರ್ಷಗಳಲ್ಲಿ 500 ಸರಕಾರಿ ಪಬ್ಲಿಕ್ ಶಾಲೆಗಳು: ಸಚಿವ ಸಂಪುಟ ನಿರ್ಣಯ
ಬೆಂಗಳೂರು: ಏಷಿಯನ್ ಅಭಿವೃದ್ಧಿ ಬ್ಯಾಂಕ್‍ನ 2500 ಕೋಟಿ ರೂ.ಗಳ ಬಾಹ್ಯ ನಿಧಿ ಸಹಯೋಗದೊಂದಿಗೆ 2025ರ ಜುಲೈ ತಿಂಗಳಿನಿಂದ 2029ರ ಜೂನ್ ತಿಂಗಳವರೆಗೆ 4 ವರ್ಷಗಳ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ 500 ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳಡಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗ ಪತ್ತೆ ಮೂಲ ಸೌಕರ್ಯಗಳನ್ನು ಒದಗಿಸಲು 145.99 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
84.88 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕ್ಷೇಮ ಕೇಂದ್ರ, ನಮ್ಮ ಕ್ಲಿನಿಕ್‍ಗಳಲ್ಲಿನ ಪ್ರಯೋಗಾಲಯಗಳನ್ನು ಮತ್ತು ಆರೋಗ್ಯ ಸೇವೆಗಳನ್ನು ಬಲಪಡಿಸಲು ಉಪಕರಣಗಳನ್ನು ಖರೀದಿಸಲು ಮತ್ತು ಐದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
72.96 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಮ್ಮ ಕ್ಲಿನಿಕ್‍ಗಳಿಗೆ ಅಗತ್ಯವಿರುವ ಔಷಧಿ ಮತ್ತು ರಾಸಾಯನಿಕಗಳನ್ನು ಪಿಎಂ-ಅಭಿಮ್ ಅನುದಾನದಲ್ಲಿ ಖರೀದಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನಿಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ-ಅಭಿಮ್ ಯೋಜನೆಯಡಿ ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅನುಮೋದನೆಯಾಗಿರುವ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಿ 16.63 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಅ.15ರಂದು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪಿಎಂ-ಅಭಿಮ್ ಯೋಜನೆ ಅಡಿಯಲ್ಲಿ ಅನುಮೋದಿತವಾಗಿರುವ ಒಟ್ಟು 108.36 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ-ನಮ್ಮ ಕ್ಲಿನಿಕ್‍ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
‘ರಾಯಚೂರು ತಾಲೂಕಿನ ಯರಮರಸ್ ಗ್ರಾಮದಲ್ಲಿ 14 ಗುಂಟೆ ಗೋಮಾಳ ಜಮೀನನ್ನು ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ವಾಹನ ನೋಂದಣಿ ಪ್ರಮಾಣ ಪತ್ರ ಮತ್ತು ಚಾಲನಾ ಪರವಾನಿಗಿ ನೀಡುವ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಂಬಂಧಿಸಿದಂತೆ ಮಾ.15ರಂದು ಹೊರಡಿಸಿರುವ ಆದೇಶದಲ್ಲಿ ‘ಸಾರ್ವಜನಿಕ-ಖಾಸಗಿ ಸಹಭಾಗಿತ್ವದ(ಪಿಪಿಪಿ) ಮಾದರಿ’ ಎಂಬುದನ್ನು ಕೈ ಬಿಡಲು ಜು.18ರಂದು ತಿದ್ದುಪಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲ ಸಕ್ಕರೆ ಕಾರ್ಖಾನೆಗಳ ಬಳಿ ಡಿಜಿಟಲ್ ವೇ ಬ್ರೀಡ್ಜ್‍ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಗುರುತಿಸಿರುವ 15 ಸ್ಥಳಗಳಲ್ಲಿ 11.01 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಡಿಜಿಟಲ್ ವೇ ಬ್ರೀಡ್ಜ್ ಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ರೈಲು ಬೋಗಿಗಳನ್ನು 4300 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಅನುದಾನದಿಂದ ಖರೀದಿಸಲು ಅನುಮೋದನೆ ನೀಡಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ‘ಸ್ವದೇಶ್ ದರ್ಶನ್ 2.0 ಯೋಜನೆಯಡಿ ಅನುಮೋದನೆಗೊಂಡಿರುವ ಮೈಸೂರಿನಲ್ಲಿ ‘ಇಕೋಲಾಜಿಕಲ್ ಎಕ್ಸ್‍ಪೀರಿಯನ್ಸ್ ಝೋನ್’ ಅಭಿವೃದ್ಧಿಪಡಿಸಲು ಯೋಜನೆಯ ಅನುಷ್ಠಾನಕ್ಕಾಗಿ 18.47 ಕೋಟಿ ರೂ.ಮೊತ್ತದ ಟೆಂಡರ್ ಅನ್ನು ರಾಜ್ಯ ಅನುಷ್ಠಾನ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ ಕರೆಯಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಹಂಪಿಯಲ್ಲಿ ‘ಟ್ರಾವೆಲೆರ್ಸ್ ನೂಕ್’ ಅಭಿವೃದ್ಧಿಪಡಿಸಲು ಯೋಜನೆಯ ಅನುಷ್ಠಾನಕ್ಕಾಗಿ 25.63 ಕೋಟಿ ರೂ.ಮೊತ್ತದ ಟೆಂಡರ್ ಅನ್ನು ರಾಜ್ಯ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮದ ಮೂಲಕ ಅನುಷ್ಠಾನಗೊಳಿಸಲು ಹಾಗೂ ಮೈಸೂರು ಲಲಿತ್ ಮಹಲ್ ಅರಮನೆ ಹೊಟೇಲ್‍ನ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಿಂದ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಹೊಟೇಲ್ ಆಪರೇಟರ್ ಅನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.