ಸಚಿವ ಸಂಪುಟ ಪುನರ್ ರಚನೆ ಸಿಎಂಗೆ ಬಿಟ್ಟ ವಿಚಾರ: ಸಚಿವ ಸತೀಶ್ ಜಾರಕಿಹೊಳಿ

Update: 2024-11-28 17:26 GMT

ಸಚಿವ ಸತೀಶ್ ಜಾರಕಿಹೊಳಿ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಮಾಡುವ ಅಧಿಕಾರ ಸಿಎಂ ಅವರಿಗಿದೆ. ಸಚಿವ ಸಂಪುಟದ ಸರ್ಜರಿ ಅಥವಾ ಪುನರ್ ರಚನೆ ಸಿಎಂ ಅವರಿಗೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೇರೆ ಬೇರೆ ಕೆಲಸಗಳ ಹಿನ್ನೆಲೆಯಲ್ಲಿ ಸಿಎಂ ಮತ್ತು ಡಿಸಿಎಂ ದಿಲ್ಲಿಗೆ ಭೇಟಿ ನೀಡಿದ್ದಾರೆ. ಅವರು ಪಕ್ಷದ ಆಂತರಿಕ ವಿಚಾರವಾಗಿಯೂ ದಿಲ್ಲಿಗೆ ತೆರಳಿದ್ದಾರೆ. ಅವರು ಹೋಗುವಾಗ ಯಾವುದೇ ಪಟ್ಟಿ ಹಿಡಿದುಕೊಂಡು ತೆರಳಲಿಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಮೊದಲಿಂದಲೂ ಚರ್ಚೆ ಇದೆ, ಅದು ಹೊಸದೇನಲ್ಲ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಸಂಪುಟ ಪುನರ್ ರಚನೆ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿದವರಲ್ಲಿ ಕೇಳಿದರೆ ಹೇಳುತ್ತಾರೆ ಎಂದು ತಿಳಿಸಿದ್ದಾರೆ.

ಶಿಗ್ಗಾಂವಿ ಕ್ಷೇತ್ರದ ಗೆಲುವಿಗೆ ಶ್ರಮಿಸಿದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅವರೊಬ್ಬರಿಗೆ ಮಾತ್ರ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿತ್ತು, ಫಲಿತಾಂಶದ ನಂತರ ಅದನ್ನು ನಾವು ಪೂರೈಸಿದ್ದೇವೆ ಎಂದು ಅವರು ಹೇಳಿದ್ದಾರೆ.

 ʼಮಹಾಮೇಳಾಂವ್ʼ ಪ್ರತಿಭಟನೆಗೆ ಮಹತ್ವ ಕೊಡುವ ಅಗತ್ಯವಿಲ್ಲ:

ಬೆಳಗಾವಿ ಅಧಿವೇಶನದಲ್ಲಿ ಹಲವು ಬಿಲ್ ಪಾಸ್ ಆಗಲಿವೆ. ಅಧಿವೇಶನದ ವೇಳೆ ʼಮಹಾಮೇಳಾಂವ್ʼ ಪ್ರತಿಭಟನೆ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ. ಮಹಾಮೇಳಾಂವ್ ಗೆ ಮೊದಲು 10 ಸಾವಿರ ಜನ ಸೇರ್ತಿದ್ರು, ನಂತರ ಅದು ಸಾವಿರ ಜನಕ್ಕೆ ಇಳಿಯಿತು ಹೀಗಾಗಿ ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರದ ಬಗ್ಗೆ ಸಿಎಂ ಈಗಾಗಳೆ ಚರ್ಚೆ ಮಾಡಿದ್ದಾರೆ. ಅಧಿವೇಶನದಲ್ಲಿ ಈ ಬಗ್ಗೆಯೂ ಚರ್ಚೆಗಳಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಹಲವು ವಿಚಾರಗಳು ಚರ್ಚೆಯಾಗುತ್ತೆ. ಹಾಗೆಂದು ಎಲ್ಲ ವಿಚಾರಗಳು ಬೆಳಗಾವಿ ಅಧಿವೇಶನದಲ್ಲಿಯೇ ಚರ್ಚೆಯಾಗಬೇಕೆಂದಿಲ್ಲ ಎಂದರು.

ಮುಸ್ಲಿಮರ ಕುರಿತು ಚಂದ್ರನಾಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳ ಹೇಳಿಕೆಗೆ ಸರಕಾರ ಉತ್ತರ ನೀಡುವ ಅಗತ್ಯವಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ. ಅಂತಹದ್ದಕ್ಕೆಲ್ಲ ಸರಕಾರ ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News