‘ವಕ್ಫ್ ತಿದ್ದುಪಡಿ ಮಸೂದೆ’ ವಿರುದ್ಧ ಹೋರಾಟ ಮಾಡದೇ ಅನ್ಯ ಮಾರ್ಗವಿಲ್ಲ: ನಸೀರ್ ಅಹ್ಮದ್
ಬೆಂಗಳೂರು: ಕೇಂದ್ರ ಸರಕಾರವು ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಹೋರಾಟ ಮಾಡುವುದು ಹೊರತುಪಡಿಸಿ ಮುಸ್ಲಿಮ್ ಸಮುದಾಯಕ್ಕೆ ಅನ್ಯ ಮಾರ್ಗವಿಲ್ಲ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆಗೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಈಗಾಗಲೇ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದೆ. ದೇಶದ ಪ್ರತಿಯೊಬ್ಬ ಮುಸ್ಲಿಮರು ಈ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಎರಡು ದಿನಗಳ ಕಾಲ ಸಮಾವೇಶವನ್ನು ನಡೆಸಿ ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ ಇನ್ನಿತರ ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದೆ. ಕೇಂದ್ರ ಸರಕಾರವು ಈ ಮಸೂದೆಯ ಕುರಿತು ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳ ಜೊತೆ ಮುಕ್ತವಾಗಿ ಚರ್ಚೆ ನಡೆಸಬೇಕಿತ್ತು ಎಂದು ನಸೀರ್ ಅಹ್ಮದ್ ಹೇಳಿದರು.
ಆದರೆ, ಕೇಂದ್ರ ಸರಕಾರ ಜಂಟಿ ಸಂಸದೀಯ ಸಮಿತಿಯ ಮೂಲಕ ಬಲವಂತವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಮ್ ಸಮುದಾಯದ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಜಂಟಿ ಸಂಸದೀಯ ಸಮಿತಿಯಲ್ಲಿ ಮುಸ್ಲಿಮ್ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ತಮ್ಮ ಬಣದವರನ್ನೆ ಸರಕಾರ ಸದಸ್ಯರನ್ನಾಗಿ ನೇಮಿಸಿದೆ ಎಂದು ಅವರು ಆಕ್ಷೇಪಿಸಿದರು.