ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧಿಸಲ್ಲ: ಆರ್.ವಿ.ದೇಶಪಾಂಡೆ

Update: 2025-04-02 18:10 IST
ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧಿಸಲ್ಲ: ಆರ್.ವಿ.ದೇಶಪಾಂಡೆ

 ಆರ್.ವಿ.ದೇಶಪಾಂಡೆ

  • whatsapp icon

ಬೆಂಗಳೂರು : ರಾಜ್ಯದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರಕಾರದ ನೀತಿಗಳೇ ಪ್ರಮುಖ ಕಾರಣವಾಗಿದೆ. ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವ ಯಾರೂ ಬೆಲೆ ಏರಿಕೆ ವಿರೋಧಿಸಿ ಮಾತನಾಡುವುದಿಲ್ಲ ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಅಹೋರಾತ್ರಿ ಧರಣಿ ಮಾಡುವುದು ಅವರ ಇಷ್ಟ. ಆದರೆ, ಅದರಲ್ಲಿ ಯಶಸ್ಸು ಆಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಬೆಲೆ ಏರಿಕೆ ಮಾಡಿರಲಿಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿದೆ. ಇದಕ್ಕೆ ಕಾರಣ ಮೇವಿನ ಬೆಲೆ ಜಾಸ್ತಿ ಆಗಿರುವುದು. ಬೆಲೆ ಏರಿಕೆ ಸಂದರ್ಭದಲ್ಲಿ ವಿಪಕ್ಷದವರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಹಣ ಎಲ್ಲಿಂದ ತರಲು ಆಗುತ್ತದೆ. ಸರಕಾರ ಸ್ವಲ್ಪ ಬೆಲೆ ಏರಿಕೆ ಮಾಡಿದೆ ನಿಜ. ಹಾಗೆಂದು ಜನರನ್ನು ಲೂಟಿ ಮಾಡಲು ಮಾಡಿದೆ ಎಂದು ಹೇಳುವುದು ಸರಿಯಲ್ಲ ಎಂದು ಆರ್.ವಿ.ದೇಶಪಾಂಡೆ ಹೇಳಿದರು.

ಪೆಟ್ರೋಲ್, ಡೀಸೆಲ್ ದರಗಳನ್ನು ನಿಯಂತ್ರಿಸುವುದು ಕೇಂದ್ರ ಸರಕಾರ. ಕೆಲವೊಮ್ಮೆ ದರ ಹೆಚ್ಚಳ ಅನಿವಾರ್ಯವಾಗಿರುತ್ತದೆ. ಅರ್ಥಶಾಸ್ತ್ರದ ಬಗ್ಗೆ ಗೊತ್ತಿರುವವರು ಯಾರು ಬೆಲೆ ಏರಿಕೆ ವಿರೋಧಿಸಲ್ಲ, ಇದು ರಿಯಾಲಿಟಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News