ಮುಸ್ಲಿಮರಿಗೆ ಮತದಾನ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಹೇಳಿಕೆ : ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್
ಬೆಂಗಳೂರು : ಮುಸ್ಲಿಮರಿಗೆ ಮತದಾನ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಹೇಳಿಕೆ ನೀಡಿದ್ದ ಚಂದ್ರಶೇಖರ ಸ್ವಾಮೀಜಿ ಅವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಧರ್ಮಗಳ ಮಧ್ಯೆ ವೈರತ್ವ ಉಂಟು ಮಾಡುವ ಪ್ರಚೋದನೆ ಮಾಡಿದ ಆರೋಪದ ಮೇಲೆ ಸೈಯ್ಯದ್ ಅಬ್ಬಾಸ್ ಎಂಬುವವರ ದೂರಿನನ್ವಯ ಉಪ್ಪಾರಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಚಂದ್ರಶೇಖರ ಸ್ವಾಮೀಜಿ ಅವರು, “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು, ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು” ಎಂದು ಹೇಳಿಕೆ ನೀಡಿದ್ದರು. ಅದು ವಿವಾದದ ಸ್ವರೂಪ ಪಡೆದುಕೊಂಡಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ್ದ ಚಂದ್ರಶೇಖರ ಸ್ವಾಮೀಜಿ, “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು, ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಆಗ ಭಾರತೀಯರು ನೆಮ್ಮದಿಯಿಂದ ಇರಲು ಸಾಧ್ಯ. ರೈತರ ಜಮೀನು ಉಳಿವಿಗಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಸರಕಾರ ಹೋದರೂ ತೊಂದರೆಯಿಲ್ಲ, ವಕ್ಫ್ ಮಂಡಳಿ ರದ್ದು ಮಾಡುವ ತೀರ್ಮಾನ ಮಾಡಬೇಕು”, ಎಂದು ಹೇಳಿದ್ದರು.
ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದರು.