ʼರಾಜ್ಯಪಾಲರ ಅಧಿಕಾರ ಮೊಟಕುʼ: 9 ವಿಧೇಯಕಗಳಿಗೆ ಸಚಿವ ಸಂಪುಟ ಅನುಮೋದನೆ
ಬೆಂಗಳೂರು: ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ-2024’ ಸೇರಿದಂತೆ 9 ವಿಧೇಯಕಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಈವರೆಗೆ ರಾಜ್ಯಪಾಲರು ಕುಲಪತಿ ಆಗಿದ್ದರು. ಈ ವಿವಿ ಹೆಚ್ಚು ಕ್ರಿಯಾಶೀಲವಾಗಬೇಕು ಹಾಗೂ ಇದು ನೇರವಾಗಿ ಆಡಳಿತ, ಪಂಚಾಯತ್‍ರಾಜ್ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿರುವುದರಿಂದ ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ಕುಲಪತಿ ಮಾಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು.
‘ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ(ತಿದ್ದುಪಡಿ)ವಿಧೇಯಕ-2024’: ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ 1965ಕ್ಕೆ ತಿದ್ದುಪಡಿ ಮಾಡುವ ಮೂಲಕ ಈ ಮೊದಲು ಪ್ರತಿ ಕಾರ್ಮಿಕರಿಂದ 20 ರೂ., ಮಾಲಕರಿಂದ ಕಾರ್ಮಿಕರ ಪಾಲು 40 ರೂ., ಸರಕಾರದಿಂದ ಕಾರ್ಮಿಕರ ಪಾಲು 20 ರೂ.ಗಳನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸುವುದನ್ನು ಹೆಚ್ಚಿಸಿ ಕಾರ್ಮಿಕರಿಂದ 50 ರೂ., ಮಾಲಕರಿಂದ ಪ್ರತಿ ಕಾರ್ಮಿಕರಿಗೆ 100 ರೂ. ಹಾಗೂ ಸರಕಾರದಿಂದ ಪ್ರತಿ ಕಾರ್ಮಿಕರಿಗೆ 50 ರೂ.ಗಳ ವಂತಿಕೆಯನ್ನು ಹೆಚ್ಚಿಸಲು ಈ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದರಿಂದಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ವಂತಿಕೆ ಹೆಚ್ಚುವುದರಿಂದ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಭಿತರಿಗಾಗಿ ಹಮ್ಮಿಕೊಂಡಿರುವ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಹಾಗೂ ಇನ್ನೂ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ. ಪ್ರಸಕ್ತ ವಾರ್ಷಿಕ ವಂತಿಕೆ 42.18 ಕೋಟಿ ರೂ.ಸಂಗ್ರಹವಾಗುತ್ತಿದ್ದು, ತಿದ್ದುಪಡಿ ವಿಧೇಯಕ ಜಾರಿಯಾದ ಬಳಿಕ 100 ಕೋಟಿ ರೂ.ತಲುಪಬಹುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.
‘ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರ) (ತಿದ್ದುಪಡಿ) ವಿಧೇಯಕ-2024’: ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಅಪಘಾತಕೀಡಾಗುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಈ ವಿಧೇಯಕ ಮಂಡನೆ ಮಾಡಲಾಗುತ್ತಿದೆ. ಅದರಂತೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗುವ ಕೊಳವೆ ಬಾವಿ ಕೊರೆಯುವ ಸಂಸ್ಥೆಗಳು, ಅನುಷ್ಠಾನ ಏಜೆನ್ಸಿಗಳು, ಭೂ ಮಾಲಕರಿಗೆ ಒಂದು ವರ್ಷದ ಶಿಕ್ಷೆ ಮತ್ತು 20 ಸಾವಿರ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ ಎಂದು ಅವರು ತಿಳಿಸಿದರು.
‘ಚಾಣಕ್ಯ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕ-2024’: 2021ರಲ್ಲಿ ಈ ಚಾಣಕ್ಯ ವಿವಿ ಕಾನೂನು ಅನುಮೋದನೆಗೊಂಡಿತ್ತು. ರಾಜ್ಯದ ಇತರೆ ಖಾಸಗಿ ವಿಶ್ವವಿದ್ಯಾಲಯಗಳ ಪ್ರಬಂಧಕ ಮಂಡಳಿಯಲ್ಲಿ ಸರಕಾರದ ಪ್ರಾತಿನಿಧ್ಯಕ್ಕೆ ಅವಕಾಶವಿದೆ. ಆದರೆ, ಚಾಣಕ್ಯ ವಿವಿಯಲ್ಲಿ ಇರಲಿಲ್ಲ. ಆದುದರಿಂದ, ಈ ವಿವಿಯಲ್ಲಿ ಸರಕಾರದ ಪ್ರಾತಿನಿಧ್ಯ ಕಲ್ಪಿಸಲು ತಿದ್ದುಪಡಿ ತರಲಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ: ಸರಕು ಮತ್ತು ಸೇವೆಗಳ ತೆರಿಗೆಯು ಏಕರೂಪದ ತೆರಿಗೆ ಪದ್ಧತಿಗಳಾಗಿರುವುದರಿಂದ ಕೇಂದ್ರ ಸರಕಾರದ ಸರಕು ಮತ್ತು ಸೇವೆಗಳ ಅಧಿನಿಯಮ ಈಗಾಗಲೇ ತಿದ್ದುಪಡಿಯಾಗಿದೆ. ಆದುದರಿಂದ ಅದೇ ರೀತಿಯ ತಿದ್ದುಪಡಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿತ್ತು. ವಿವಾದಿತ ತೆರಿಗೆ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಾಗ 50 ಕೋಟಿ ರೂ.ಬದಲಿಗೆ 20 ಕೋಟಿ ರೂ.ಗಳಿಗೆ ಅವಕಾಶ ಕಲ್ಪಿಸಲು ಈ ವಿಧೇಯಕ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಎರಡನೇ ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ: ಸ್ವಯಂ ಘೋಷಣೆ ಆಸ್ತಿ ತೆರಿಗೆಯನ್ನು ಘೋಷಿಸಿಕೊಂಡಿರುವ ಸ್ವತ್ತಿನ ಮಾಲಕರು ಮೇಲ್ಮುಖವಾಗಿ ಸ್ವಯಂ ಪರಿಷ್ಕರಣೆ ಬಯಸಿದ್ದಲ್ಲಿ ನಿಯಮಗಳಲ್ಲಿ ಅವಕಾಶವಿರದ ಕಾರಣ ಅನಗತ್ಯ ವಿಳಂಬ ತಪ್ಪಿಸಲು ಬಿಬಿಎಂಪಿ (ತಿದ್ದುಪಡಿ) ಅಧ್ಯಾಧೇಶ, 2024 ಅಂತ್ಯಗೊಳ್ಳುವ ಮುನ್ನ ಅದಕ್ಕೆ ಬದಲಿಯಾಗಿ ವಿಧಾನಮಂಡಲದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಈ ವಿಧೇಯಕವನ್ನು ಮಂಡಿಸಲಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕರ್ನಾಟಕ ಪ್ರವಾಸೋದ್ಯಮ ರೋಪ್‍ವೇಸ್ ವಿಧೇಯಕ, 2024ಕ್ಕೆ ಅನುಮೋದನೆ: ಪ್ರವಾಸಿ ತಾಣಗಳಲ್ಲಿ ರೋಪ್ ವೇಸ್ ಮಾಡಬೇಕು ಎಂದು ನಿರ್ಣಯಿಸಿದ್ದೇವೆ. ಆ ಸಂದರ್ಭಗಳಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಅದನ್ನು ಗುರುತಿಸಲು, ಜವಾಬ್ದಾರಿ ಹಂಚಿಕೆ ಮಾಡಲು, ಈ ವಿಧೇಯಕ ಮಂಡಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
12 ಕಡೆ ರೋಪ್ ವೇಸ್‍ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ಸಮೀಕ್ಷೆ ಮಾಡಿದ್ದೇವೆ. ನಂದಿ ಬೆಟ್ಟದಲ್ಲಿ ಕೆಲಸ ಆರಂಭ ಆಗಿದೆ. ಸವದತ್ತಿ ಹಾಗೂ ಯಾದಗಿರಿಯಲ್ಲಿ ಸಮೀಕ್ಷೆ ಕೆಲಸ ಆರಂಭವಾಗಿದೆ. ಚಾಮುಂಡಿ ಬೆಟ್ಟದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಅಂಜನಾದ್ರಿ ಬೆಟ್ಟ, ಯಲ್ಲಮ್ಮನ ಗುಡ್ಡ ಸೇರಿದಂತೆ ಇನ್ನಿತರೆಡೆ ರೋಪ್ ವೇಸ್ ಮಾಡಬೇಕು ಎಂಬ ಆಲೋಚನೆ ಇದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಇದಲ್ಲದೆ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024’ಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.