ʼಅನ್ನಭಾಗ್ಯʼ ಜಾರಿಗೊಳಿಸಿದ ಒಂದೇ ತಿಂಗಳೊಳಗೆ 1 ಕೋಟಿಗೂ ಅಧಿಕ ಕುಟುಂಬಗಳಿಗೆ 566 ಕೋಟಿ ರೂ. ಜಮೆ: ಸಚಿವ ಕೆ.ಎಚ್.ಮುನಿಯಪ್ಪ

Update: 2023-08-04 13:55 GMT

ಬೆಂಗಳೂರು, ಆ.4:ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಒಂದೇ ತಿಂಗಳೊಳಗೆ 1 ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಅಡಿಯಲ್ಲಿ 566 ಕೋಟಿ ರೂ. ಜಮೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯು ನಮ್ಮ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ ಪಡಿತರ ಧಾನ್ಯ ಮತ್ತು ಆದ್ಯತಾ ಪಡಿತರ ಚೀಟಿಯ ಫಲಾನುಭವಿಗಳಿಗೆ 5 ಕೆ.ಜಿ ಪಡಿತರ ಧಾನ್ಯದ ಜೊತೆಗೆ ಹೆಚ್ಚುವರಿಯಾಗಿ ತಲಾ 5 ಕೆ.ಜಿ ಪಡಿತರ ಧಾನ್ಯ ಸೇರಿ ಒಟ್ಟು ತಲಾ 10 ಕೆ.ಜಿ. ಪಡಿತರ ನೀಡುವುದು ಈ ಗ್ಯಾರಂಟಿ ಯೋಜನೆಯ ಉದ್ದೇಶವಾಗಿದೆ ಎಂದರು.

ಕೇಂದ್ರ ಸರಕಾರವು ಕರ್ನಾಟಕಕ್ಕೆ ಅಕ್ಕಿ ನೀಡಲು ನಿರಾಕರಿಸಿದ 5 ಕೆ.ಜಿ. ಆಹಾರ ಧಾನ್ಯಗಳ ಬದಲಾಗಿ ಅರ್ಹ ಫಲಾನುಭವಿಗಳಿಗೆ ಪ್ರತಿ ಕೆ.ಜಿ.ಗೆ ಎಫ್‍ಐಸಿ ನಿಗದಿಪಡಿಸಿದ 34 ರೂಪಾಯಿಯಂತೆ ಪ್ರತಿ ಫಲಾನುಭವಿಗೆ 170 ರೂ., ನೇರ ನಗದು ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿ ಕುಟುಂಬಗಳಲ್ಲಿ 4.42 ಕೋಟಿ ಫಲಾನುಭವಿಗಳು ಇದ್ದು, ಈವರೆವಿಗೂ 1 ಕೋಟಿ ಕುಟುಂಬಗಳಿಗೆ 566 ಕೋಟಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಯೋಜನೆಗೆ ಚಾಲನೆ ದೊರೆತು ಇಂದಿಗೆ 25 ದಿನಗಳಾಗಿದೆ. ಅತಿ ಕಡಿಮೆ ಸಮಯದಲ್ಲಿ ನಮ್ಮ ಇಲಾಖೆಯು 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಿರುವುದು ದಾಖಲೆಯಾಗಿದೆ. ಉಳಿದಂತೆ 28 ಲಕ್ಷ ಕುಟುಂಬಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರ ಪಡೆಯದೇ ಇರುವ ಫಲಾನುಭವಿಗಳು 5,32,349, ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಫಲಾನುಭವಿಗಳ ಸಂಖ್ಯೆ 3,40,425 ಹಾಗೂ ಚಾಲ್ತಿಯಲ್ಲಿ ಇರದೇ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಆಗದಿರುವ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆಯು 19,27,226 ಇದೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಇಲಾಖೆಯು ಬ್ಯಾಂಕ್ ಖಾತೆ ಹೊಂದದಿರುವ ಕುಟುಂಬದ ಮುಖ್ಯಸ್ಥರ ವಿವರಗಳನ್ನು ಜಿಲ್ಲಾ, ತಾಲೂಕು ಹಾಗೂ ನ್ಯಾಯಬೆಲೆ ಅಂಗಡಿವಾರು ವಿಂಗಡಿಸಿ, ಪಡಿತರ ಚೀಡಿದಾರರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಅಂಚೆ ಇಲಾಖೆಯ ಸಹಯೋಗದೊಂದಿಗೆ ಜುಲೈ ತಿಂಗಳಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ 170 ಕ್ಯಾಂಪ್ ಏರ್ಪಡಿಸಿ, 1,19,502 ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ಮುನಿಯಪ್ಪ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News