ತುಮಕೂರನ್ನು ʼಗ್ರೇಟರ್ ಬೆಂಗಳೂರುʼ ಎಂದು ಪರಿಗಣಿಸಲು ಪ್ರಸ್ತಾವನೆ ಸಲ್ಲಿಕೆ : ಜಿ.ಪರಮೇಶ್ವರ್
ಬೆಂಗಳೂರು : ʼಬೆಂಗಳೂರಿನ ಭಾಗವಾಗಿ ತುಮಕೂರು ಬೆಳೆಯುತ್ತಿದ್ದು, ವಿಮಾನ ನಿಲ್ದಾಣ ಮಾಡಿದರೆ ಅನುಕೂಲವಾಗಲಿದೆʼ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼ20 ಸಾವಿರ ಎಕರೆ ಜಾಗದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ತುಮಕೂರಿನಲ್ಲಿ ನಿರ್ಮಾಣವಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದ ಕಾಮಗಾರಿ ಮುಗಿದಿದೆ. 150 ಕೈಗಾರಿಕೆಗಳು ಹಾಗೂ ಜಪಾನ್ ಟೌನ್‌ಶಿಪ್ ಬರುತ್ತಿದೆ. ಎಚ್‌ಎಎಲ್ ಹೆಲಿಕ್ಯಾಪ್ಟರ್ ಫ್ಯಾಕ್ಟರಿ ಕೆಲಸ ಆರಂಭಿಸಿದೆ. ಇನ್ನೂ ಹಲವು ದೊಡ್ಡ ಕೈಗಾರಿಕೆಗಳು ಬರಲಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಮಾಡಿದರೆ ಉತ್ತಮ ಎಂಬುದನ್ನು ತಿಳಿಸಲಾಗಿದೆʼ ಎಂದರು.
ʼಮುಂದಿನ ದಿನಗಳಲ್ಲಿ ತುಮಕೂರು ಅಭಿವೃದ್ಧಿಗೆ ಬೇರೆ ಬೇರೆ ಹೊಸ ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದ್ದು, ಗ್ರೇಟರ್ ಬೆಂಗಳೂರು ಎಂದು ಪರಿಗಣಿಸುವಂತೆ ಕೇಳಿಕೊಳ್ಳಲಾಗಿದೆ. ನೆಲಮಂಗಲ, ದಾಬಸ್ ಪೇಟೆವರೆಗೆ ಬೆಂಗಳೂರು ಬೆಳೆದಿದೆ. ತುಮಕೂರಿನವರೆಗೆ ಮೆಟ್ರೋ ರೈಲು ವಿಸ್ತರಣೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಮಕೂರನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದುʼ ಎಂದು ತಿಳಿಸಿದರು.
ಕಾನೂನು ಪ್ರಕಾರ ಕ್ರಮ:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನ ವಿರುದ್ಧದ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, "ದೂರು ಬಂದಾಗ ಗಂಭೀರವಾಗಿ ತೆಗೆದುಕೊಳ್ಳಬೇಕಲ್ಲವೇ? ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಗೋಪಾಲ್ ಜೋಶಿ ಎಂಬುವರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಹೇಳಿದರು.
ಈ ಪ್ರಕರಣದಲ್ಲಿ ಪ್ರಹ್ಲಾದ್ ಜೋಶಿಯವರ ಪಾತ್ರ ಇರುವುದು ನನಗೆ ಗೊತ್ತಿಲ್ಲ. ಬಂಧಿತರನ್ನು ವಿಚಾರಣೆ ನಡೆಸಿ, ಹೇಳಿಕೆ ಪಡೆದಾಗ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ತನಿಖೆಗೆ ಮೊದಲು ಹೇಳುವುದು ಸರಿಯಲ್ಲ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ವರದಿ ಬಾರದೆ ಏನು ಹೇಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ನೀಡಿದ್ದಾರೆ. ಇವತ್ತು ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಂತರಿಕವಾಗಿ ಗಂಭೀರ ವಿಚಾರ ಆಗಿರುವುದರಿಂದ ಭೇಟಿ ನೀಡಿ ವರದಿ ನೀಡುವಂತೆ ರಾಜ್ಯ ಬಂಧಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.