33ಲಕ್ಷ ರೈತರ ಖಾತೆಗೆ 628 ಕೋಟಿ ರೂ. ಬರ ಪರಿಹಾರದ ಹಣ ಬಿಡುಗಡೆ: ಸಚಿವ ಕೃಷ್ಣ ಭೈರೇಗೌಡ

Update: 2024-02-11 12:46 GMT

ಬೆಂಗಳೂರು: ರಾಜ್ಯ ಸರಕಾರ ಬರ ನಿರ್ವಹಣೆಗೆ ಪರಿಹಾರ ಕ್ರಮವಾಗಿ ಈಗಾಗಲೇ 2ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದ್ದು, ಅದರಂತೆ 628 ಕೋಟಿ ರೂಪಾಯಿ ನೇರವಾಗಿ 33 ಲಕ್ಷ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ರವಿವಾರ ವಿಧಾನಸೌಧದ ತಮ್ಮ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 1.6 ಲಕ್ಷ ರೈತರ ಬ್ಯಾಂಕ್ ಖಾತೆಯ ಮಾರ್ಪಾಡು ಪ್ರಕ್ರಿಯೆ ನಡೆಯುತ್ತಿದ್ದು, ಇದು ಸರಿಯಾದ ಕೂಡಲೇ ಅವರ ಖಾತೆಗಳಿಗೂ ಬರ ಪರಿಹಾರದ ಹಣವನ್ನು ರಾಜ್ಯ ಸರಕಾರದಿಂದ ಬಿಡುಗಡೆ ಮಾಡಲಾಗುವುದು ಎಂದರು.

ಅರ್ಹ ರೈತರಿಗೆ ಬರ ಪರಿಹಾರ ತಲುಪಿಸುವ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿರುವ ರೈತ ಪಟ್ಟಿಯನ್ನು ಪ್ರಕಟ ಮಾಡಬೇಕು ಎಂದು ಸೂಚನೆ ನೀಡಿರುವ ಹಿನ್ನೆಲೆ, ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಹೆಸರು ಪ್ರಕಟಣೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ, ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯ ಸರಕಾರವು ರಾಜ್ಯದ 223 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿದ್ದು, ಕುಡಿಯುವ ನೀರು, ಮೇವು ಹಾಗೂ ಇತರೆ ಮೂಲಭೂತ ಸಮಸ್ಯೆಗಳ ನಿವಾರಣೆಗೆ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಳ ಖಾತೆಗಳಿಗೆ 870 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಹಾರದ ಹಣವನ್ನು ಸಮರ್ಪಕವಾಗಿ ಬಳಸಲು, ಶಾಸಕರ ಅಧ್ಯಕ್ಷತೆಯಲ್ಲಿ 223 ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ, 431 ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಅದೇ ರೀತಿ, ರಾಜ್ಯದ 156 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಅಲ್ಲದೇ 46 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿನ 46 ವಾರ್ಡ್‍ಗಳಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಐದು ವರ್ಷದ ಅಂಕಿ-ಅಂಶಗಳ ಆಧಾರದಮೇಲೆ, ಮುಂಜಾಗ್ರತಾ ಕ್ರಮವಾಗಿ, ಮುಂಬರುವ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ 782 ಗ್ರಾಮಗಳು ಹಾಗೂ 1193 ವಾರ್ಡ್‍ಗಳನ್ನು ಗುರುತಿಸಲಾಗಿದ್ದು, ಅಂತಹ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮವನ್ನು ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗೆ ಹೊಸ ಕೊಳವೆಬಾವಿಗಳ ಕೊರೆಯುವ ಅವಶ್ಯಕತೆ ಇದ್ದಲ್ಲಿ, ಕೊಳವೆ ಬಾವಿಗಳನ್ನು ಕೊರೆಯಲು ಕ್ರಮವಹಿಸುವಂತೆ ಸಿಎಂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.  ಮೇವಿನ ಸಮಸ್ಯೆ ನೀಗಿಸಲು ನವೆಂಬರ್ ತಿಂಗಳಲ್ಲಿ ಮೊದಲ ಹಂತವಾಗಿ 7ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‍ಗಳನ್ನು ರೈತರಿಗೆ ನೀಡಲಾಗಿದ್ದು, ಎರಡನೆ ಹಂತವಾಗಿ 7ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್‍ಗಳನ್ನು ರೈತರಿಗೆ ವಿತರಿಸಲು ಪಶುಸಂಗೋಪನೆ ಇಲಾಖೆಗೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News