ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಾರಕ ವೈರಸ್‌ ಗೆ 7 ಚಿರತೆ ಮರಿಗಳು ಸಾವು

Update: 2023-09-18 06:13 GMT

ಬೆಂಗಳೂರು: ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವರದಿಯಾಗಿದೆ. 

ʼಪೆಲಿನ್ ಪ್ಯಾನ್ಲೂಕೋಪೇನಿಯಾʼ ಎಂಬ ಮಾರಕ ವೈರಸ್‌ಗೆ ಚಿರತೆ ಮರಿಗಳು ಬಲಿಯಾಗಿವೆ ಎನ್ನಲಾಗಿದೆ.

ಬೆಕ್ಕಿನಿಂದ ಹರಡುವ‌ ಮಾರಕ ರೋಗ ಇದಾಗಿದ್ದು, ಆಗಸ್ಟ್‌ 22ರಂದು ಉದ್ಯಾನದ ಚಿರತೆ ಮರಿಗಳಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಸೆಪ್ಟೆಂಬರ್ 5ರ ವೇಳೆಗೆ ಏಳೂ ಮರಿಗಳು ಸಾವಿಗೀಡಾಗಿವೆ ಎಂದು ತಿಳಿದು ಬಂದಿದೆ.

ಬನ್ನೇರುಘಟ್ಟ ಉದ್ಯಾನದಲ್ಲಿ ಇತ್ತೀಚಿಗಷ್ಟೇ ಚಿರತೆ ಸಫಾರಿ ಆರಂಭಿಸಿ ಒಂಬತ್ತು ಚಿರತೆ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗಿತ್ತು. ಆ ಪೈಕಿ ಸೋಂಕಿನಿಂದ ಮೂರು ಚಿರತೆ ಮರಿಗಳು ಮೃತಪಟ್ಟಿವೆ.ಬಿಳಿಗಿರಿರಂಗನ ಬೆಟ್ಟ, ಮೈಸೂರು ಮೃಗಾಲಯ ಮತ್ತು ಮದ್ದೂರು ಬಳಿ ಗಾಯಗೊಂಡಿದ್ದ ಚಿರತೆ ಮರಿಗಳನ್ನು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಪುನರ್ವಸತಿ ಕೇಂದ್ರಕ್ಕೆ ತರಲಾಗಿತ್ತು. ಅಲ್ಲಿ ಆರೈಕೆ ಮಾಡಿದ ನಂತರ ಸಫಾರಿಗೆ ಬಿಡಲಾಗಿತ್ತು. ಇನ್ನೂ ಪುನರ್ವಸತಿ ಕೇಂದ್ರದ ಆರೈಕೆಯಲ್ಲಿದ್ದ ನಾಲ್ಕು ಚಿರತೆ ಮರಿಗಳು ಮೃತಪಟ್ಟಿವೆ. ಈ ಕೇಂದ್ರದಲ್ಲಿ ಒಟ್ಟು 80 ಚಿರತೆಗಳಿವೆ.

ಬೆಕ್ಕುಗಳಿಂದ ಹರಡುವ ವೈರಸ್‌

ಬೆಕ್ಕುಗಳಿಂದ ಹರಡುವ ವೈರಸ್‌ ಇದಾಗಿದ್ದು, ಕಾಡು ಬೆಕ್ಕು ಮತ್ತು ಸಾಕು ಬೆಕ್ಕುಗಳಿಂದ ಸೋಂಕು ಹರಡುವ ಸಾಧ್ಯತೆಯಿದೆ. ಸೋಂಕು ತಗುಲಿದ ಪ್ರಾಣಿಗಳು ಆಹಾರ ಜೀರ್ಣವಾಗದೆ ರಕ್ತ ಭೇದಿಯಾಗುತ್ತದೆ. ಬಿಳಿ ರಕ್ತಕಣಗಳು ಕಡಿಮೆಯಾಗಿ ನಿಶ್ಯಕ್ತಿಯಿಂದ ಮೃತಪಡುತ್ತವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News