BJP ಟಿಕೆಟ್ ಕೊಡಿಸುವುದಾಗಿ ನಿವೃತ್ತ ಅಧಿಕಾರಿಗೆ ವಂಚನೆ ಆರೋಪ: ಎಫ್‌ಐಆರ್‌ ದಾಖಲು

Update: 2023-10-22 16:57 GMT

ಬೆಂಗಳೂರು, ಅ.22: ಚೈತ್ರಾ ವಂಚನೆ ಪ್ರಕರಣದ ಮಾದರಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎಸ್.ಪಿ. ಮತ್ತು ಕೊಟ್ಟೂರಿನ ರೇವಣಸಿದ್ದಪ್ಪ ಅವರು 2 ಕೋಟಿ ರೂ.ಗೂ ಅಧಿಕ ಹಣವನ್ನು ಪಡೆದಿದ್ದು, ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೂ ಶಾಮೀಲಾಗಿದ್ದಾರೆ. ಹಣವನ್ನು ವಾಪಾಸ್ ಕೊಡುವಂತೆ ಒತ್ತಾಯಿಸಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಲೋಕೋಪಯೋಗಿ (ಪಿಡಬ್ಲ್ಯುಡಿ) ಇಲಾಖೆಯ ನಿವೃತ್ತ ಸಹಾಯಕ ಅಭಿಯಂತರ ಶಿವಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.

ರವಿವಾರ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿರುವ ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟೂರಿನ ರೇವಣ  ಸಿದ್ದಪ್ಪ ನನ್ನ ನಿವೃತ್ತಿ ಕಾರ್ಯ ಕ್ರಮದಲ್ಲಿ ಪರಿಚಯವಾಗಿ 2023ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ನನ್ನನ್ನು ಪದೇ ಪದೇ ಭೇಟಿ ಮಾಡಿ ಬಿಜೆಪಿಯ ಟಿಕೆಟನ್ನು ನಿಮಗೆ ಕೊಡಿಸುವೆ, ನೀವು ಟಿಕೆಟ್ ಪಡೆಯಲು ಯೋಗ್ಯರು.. ಎಂದು ಪುಸಲಾಯಿಸುವ ಮಾತುಗಳನ್ನು ಹೇಳಿ ನನಗೆ ಟಿಕೆಟ್ ಮೇಲೆ ಶ್ರದ್ಧೆ ಬರುವ ರೀತಿಯಲ್ಲಿ ನಡೆದುಕೊಂಡಿದ್ದರು. 2022ರ ಅ.23ರಂದು ರೇವಣಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆತಂದು ಒಂದು ಹೋಟೆಲ್ನಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ. ಎಂಬವರನ್ನು ಪರಿಚಯಿಸಿದ್ದರು ಎಂದು ವಿವರಿಸಿದರು.

ಶೇಖರ್ ಎಸ್.ಪಿ. ನನಗೆ ಪರಿಚಯ ಆದ ಮೇಲೆ, ಮಲ್ಲೇಶ್ವರದ ಬಿಜೆಪಿ ಕಚೇರಿ ಜಗನ್ನಾಥ‘ವನಕ್ಕೆ ಕರೆದುಕೊಂಡು ಹೋಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನನ್ನ ಆತ್ಮೀಯ ಸ್ನೇಹಿತರೆಂದು ಹೇಳಿ ಪರಿಚಸಿದರು. ನಳಿನ್ ಕುಮಾರ್ ಕಟೀಲು ನನ್ನ ಬಳಿ ಮಾತನಾಡಿ ಟಿಕೆಟ್ ವಿಚಾರದ ಎಲ್ಲ ವ್ಯವಹಾರವನ್ನು ಶೇಖರ್ ಎನ್.ಪಿ. ಅವರ ಬಳಿಯೇ ಮಾತನಾಡಿ ಎಂದು ತಿಳಿಸಿದರು.

ಶೇಖರ್ ಎನ್.ಪಿ. ನನ್ನ ಬಳಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ  ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಕೇಳಿದರು. ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ನಿಮ್ಮ ಹಣವನ್ನು ವಾಪಸ್ ನೀಡುತ್ತೇನೆಂದು ತಿಳಿಸಿದರು. ಹೀಗೆ 2022ರ ಅ.9ರಿಂದ ಆರಂ‘ವಾದ ನಮ್ಮ ಹಣದ ವ್ಯವಹಾರ ಎಪ್ರಿಲ್ 2023ಕ್ಕೆ 2.55 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಅವರು ದೂರಿದರು.

2022ರ ಅ.15ರಂದು ಚಿತ್ರದುರ್ಗದಲ್ಲಿ ರಸ್ತೆಯ ಬಳಿ ಶೇಖರ್ ಎನ್.ಪಿ. ಕುಂದಾಪುರದ ಅರ್ಜುನ ಎಂಬವನನ್ನು ಕಳುಹಿಸಿ 50 ಲಕ್ಷ ರೂ. ಪಡೆದಿದ್ದಾರೆ. ಆನಂತರ ಆನ್ಲೈನ್ ಪೇಮೆಂಟ್ ಸೇರಿ ಇದೇ ರೀತಿಯಲ್ಲಿ 1 ಕೋಟಿ 65 ಲಕ್ಷ ರೂ. ಶೇಖರ್ ಎನ್.ಪಿ. ಅವರಿಗೆ ಸಂದಾಯವಾಗಿದೆ ಎಂದು ಶಿವಮೂರ್ತಿ ವಿವರ ನೀಡಿದರು.

ಇದರ ಜೊತೆಗೆ ಕೊಟ್ಟೂರು ತಾಲೂಕಿನ, ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡನಾಗಿದ್ದ ರೇವಣಸಿದ್ದು ಬಿನ್ ಸಿದ್ದಲಿಂಗಪ್ಪ ಒಂದು ಹೋಟೆಲ್‌ ಗೆ ಕರೆದುಕೊಂಡು ಹೋಗಿ, ಬಿಜೆಪಿ ಹಿರಿಯ ನಾಯಕರಿಗೆ ಮತ್ತು ಇತರರಿಗೆ ಕೊಡಬೇಕೆಂದು ಹೇಳಿ 50 ಲಕ್ಷ ರೂ. ನಗದನ್ನು ಕುಗ್ಗಿ ತಾಲೂಕಿನ ಚಿಕ್ಕಹೋಗಿಗಹಳ್ಳಿ ಗ್ರಾಮದ ಆರೆಸೆಸ್ಸ್ ಮುಖಂಡರಾದ ನಾಗಣ್ಣ ಅವರು ಪಡೆದಿರುತ್ತಾರೆ ಎಂದು ಶಿವಮೂರ್ತಿ ತಿಳಿಸಿದರು.

ಈ ಹಣವನ್ನು ನನ್ನ ಸ್ವಂತ ನಿವೇಶನವನ್ನು ಮಾರಾಟ ಮಾರಿ ನನ್ನ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಮಾಡಿ, ನನ್ನ ಆಪ್ತ ಸ್ನೇಹಿತರಿಂದ ಸಾಲ ಪಡೆದು ಹಾಗೂ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ಸೇರಿಸಿ ಇವರಿಗೆ ಕೊಟ್ಟಿರುತ್ತೇನೆ. ಇದಾದ ನಂತರದ ದಿನಗಳಲ್ಲಿ 2023ರ ಎಪ್ರಿಲ್ ತಿಂಗಳಿನಲ್ಲಿ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ(ಎಸ್ಸಿ)ದ ಬಿಜೆಪಿ ಟಿಕೆಟ್ ನನಗೆ ಬರುವುದಿಲ್ಲ. ಬದಲಿಗೆ ಬಿ.ರಾಮು ಎಂಬವರಿಗೆ ಸಿಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದರಿಂದ ಆಘಾತವಾದ ನನಗೆ ಏನು ಮಾಡಬೇಕೆಂದು ತಿಳಿಯದೆ ಮೇಲೆ ತಿಳಿಸಿರುವ ಹಣ ಪಡೆದವರಿಗೆ ಕರೆ ಮಾಡಿದಾಗ ಒಂದು ತಿಂಗಳು ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಬೇರೆಯವರ ನಂಬರಿನಿಂದ ಕರೆ ಮಾಡಿದಾಗ ಸ್ವೀಕರಿಸಿದ್ದಾರೆ. ಆಗ ನನ್ನ ಬಳಿ ಮಾತನಾಡಿದ ಇವರು ಹಣ ವಾಪಸ್ ನೀಡಲು ಹಲವಾರು ದಿನಾಂಕಗಳು, ಸಬೂಬುಗಳನ್ನು ನೀಡುತ್ತಾ ಬಂದಿದ್ದು, ಈವರೆಗೆ ಹಣ ನೀಡಲು ಸತಾಯಿಸುತ್ತಿದ್ದಾರೆ ಎಂದು ಅವರು ದೂರಿದರು.

ನ್ಯಾಯ ಒದಗಿಸುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಾಯ

ನನ್ನ ತಮ್ಮನ ಸ್ನೇಹಿತರು, ಕೆಲ ಸಂಘಟನೆಯವರ ಬಳಿ ಮಾತನಾಡಿದಾಗ ಚೆಕ್ ಕೊಟ್ಟರು. ಅವುಗಳು ಬೌನ್ಸ್ ಆಗಿವೆ. ಹಾಗಾಗಿ ನಾನು ಅನಿವಾರ್ಯವಾಗಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದೇನೆ. ಈಗ ಹಣ ಕೊಡುವಂತೆ ಒತ್ತಾಯಿಸಿದರೆ ನನಗೆ ಜೀವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಹಾಗಾಗಿ ನನ್ನ ಹಣವನ್ನು ನನಗೆ ಕೊಡಿಸಿ, ನ್ಯಾಯ ಒದಗಿಸಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News