ಶಿವಮೊಗ್ಗ‌| ಕಸದ ವಿಚಾರಕ್ಕೆ ವ್ಯಕ್ತಿಯ ಕೊಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2023-11-22 12:21 GMT

ಪ್ರಶಾಂತ್‌ / ಗುತ್ಯಪ್ಪ / ಪ್ರದೀಪ್‌ / ಅವಿನಾಶ್‌ / ಅಕ್ಷಯ್

ಶಿವಮೊಗ್ಗ: ಹುಣಸೇಮರದ ಕಸದ ವಿಚಾರಕ್ಕೆ ಸಂಬಂಧಿಸಿದಂತೆಮಾತಿಗೆ ಮಾತು ಬೆಳೆದು ಪಕ್ಕದ ಮನೆಯ ವ್ಯಕ್ತಿ ಮೇಲೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಮತ್ತು ಓರ್ವ ಆರೋಪಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಶಿಕಾರಿಪುರ ಪಟ್ಟಣದ ಅವಿನಾಶ್ ಅಲಿಯಾಸ್ ಅವಿ(25), ಪ್ರಶಾಂತ್ ಅಲಿಯಾಸ್ ಗುಂಡ (26), ಆರ್.ಪ್ರದೀಪ್ (28) ಮತ್ತು ಗುತ್ಯಪ್ಪ ಅಲಿಯಾಸ್ ಗೌತಮ್ (28) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಅವಿನಾಶ್, ಪ್ರಶಾಂತ್, ಪ್ರದೀಪ್‌ ಗೆ ತಲಾ 90 ಸಾವಿರ ರೂ. ಮತ್ತು ಗುತ್ಯಪ್ಪನಿಗೆ 80 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ತಲಾ ಎರಡು ವರ್ಷ ಸಾದಾ ಶಿಕ್ಷೆ ವಿಧಿಸಲಾಗುತ್ತದೆ. ಇದೇ ಪ್ರಕರಣದಲ್ಲಿ ಅಕ್ಷಯ್ (24) ಎಂಬಾತನಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲನಾದರೆ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ.

ಎ.27 ರ 2017 ರಂದು ಶಿಕಾರಿಪುರ ಪಟ್ಟಣದ ಚೌರಡೇರಕೇರಿಯ ಗೋಣಿ ಮೂರ್ತಪ್ಪ (46) ಎಂಬುವರ ಹತ್ಯೆಯಾಗಿತ್ತು. ಗೋಣಿ ಮೂರ್ತಪ್ಪ ಮತ್ತು ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ಅಕ್ಕಪಕ್ಕದ ನಿವಾಸಿಗಳು. ಹುಣಸೇಮರದ ಕಸದ ವಿಚಾರದಲ್ಲಿ ಜಗಳವಾಗಿತ್ತು. ಅದೇ ದ್ವೇಷದಿಂದ ಆರೋಪಿಗಳು ಗೋಣಿ ಮೂರ್ತಪ್ಪ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮೂರ್ತಪ್ಪ ಮೃತಪಟ್ಟಿದ್ದರು. ಕೊಲೆ ಪ್ರಕರಣ ಸಂಬಂಧ ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕರಾಗಿದ್ದ ಹರೀಶ್ ಪಟೇಲ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ಎರಡು ದಿನಗಳ ಹಿಂದಷ್ಟೇ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಲಾಗಿತ್ತು. ಐವರ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ನಾಲ್ವರಿಗೆ ಜೀವಾವಧಿ ಶಿಕ್ಷೆ, ಒಬ್ಬರಿಗೆ ಸಾದಾ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹೇಮಂತ್‌  ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News