ಮುಖ್ಯೋಪಾಧ್ಯಾಯರ ವಿರುದ್ಧ ಸುಳ್ಳು ಆರೋಪ; ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿಗೆ ಹೈಕೋರ್ಟ್ ಆದೇಶ

Update: 2023-10-15 16:35 GMT

ಬೆಂಗಳೂರು, ಅ.15: ಬಾಗಲಕೋಟೆಯ ಮುಖ್ಯೋಪಾಧ್ಯಾಯರ ವಿರುದ್ಧ ಎಸ್‍ಸಿ ಮತ್ತು ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಹಲವು ಆರೋಪಗಳಡಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ಅನಗತ್ಯ ದೂರುಗಳನ್ನು ಸಲ್ಲಿಸಿದ್ದ ಚಂದ್ರು ರಾಥೋಡ್ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 1.5 ಲಕ್ಷ ರೂ. ನೆರವು ಪಡೆದಿದ್ದು, ಇದೀಗ ದೂರುಗಳು ಕ್ಷುಲ್ಲಕವೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಣ ವಾಪಸ್ ಪಡೆಯವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶಿಸಿದೆ.

ಇದಲ್ಲದೆ ಬಾಗಲಕೋಟೆ ಜಿಲ್ಲೆಯ ಮರಡಿ ಮಲ್ಲೇಶ್ವರ ಹೈಸ್ಕೂಲ್‍ನ ಮುಖ್ಯೋಪಾಧ್ಯಾಯರಾದ ಶಿವಲಿಂಗಪ್ಪ ಬಿ. ಕೆರಕಲಮಟ್ಟಿ ವಿರುದ್ಧದ ಪ್ರಕರಣಗಳನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ರದ್ದುಗೊಳಿಸಿದೆ.

ಎಸ್‍ಸಿ ಮತ್ತು ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ 1989 ರಡಿ ಮುಖ್ಯೋಪಾಧ್ಯಾಯರ ವಿರುದ್ಧ ಶಿಕ್ಷಕರು ಪ್ರಕರಣ ಹೂಡಿದ್ದಾರೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ನೆರವು ನೀಡಿದೆ. ಆದರೆ, ಇಂತಹ ನೆರವು ನೀಡುವ ಮೊದಲು ಸರಕಾರ ಯಾರು ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಏನು ಎತ್ತ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು ಎಂದು ನ್ಯಾಯಪೀಠ ಹೇಳಿದೆ.

ಜತೆಗೆ, ಅರ್ಜಿದಾರರ ವಿರುದ್ಧ ಶಿಕ್ಷಕರು ಕ್ರಿಮಿನಲ್ ದೂರು ದಾಖಲಿಸಿರುವುದು, ಆನಂತರ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಕೋರಿರುವುದು ದೃಢಪಟ್ಟಿದೆ. ಆದರೆ ಆ ದೂರುಗಳು ನಕಲಿ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಣದಿಂದ ಪಾವತಿ ಮಾಡಿರುವ 1.5 ಲಕ್ಷ ರೂ.ಗಳನ್ನು ವಾಪಸ್ ಪಡೆಯಲೇಬೇಕು ಎಂದು ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣವೇನು?: ರಾಥೋಡ್ 1988ರ ಡಿ.12 ರಂದು ಶಿಕ್ಷಕರಾಗಿ ಸೇವೆಗೆ ಸೇರ್ಪಡೆಯಾಗಿದ್ದರು. ಕೆಲವು ದುರ್ನಡತೆಗಳ ಹಿನ್ನೆಲೆಯಲ್ಲಿ ಅವರನ್ನು 2012 ಸೇವೆಯಿಂದ ವಜಾಗೊಳಿಸಲಾಗಿತ್ತು. 2020ರಲ್ಲಿ ಹೈಕೋರ್ಟ್ ರಾಥೋಡ್ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕು ಹಾಗೂ ಹಿಂಬಾಕಿ ನೀಡಬೇಕು ಎಂದು ಸರಕಾರಕ್ಕೆ ಆದೇಶ ನೀಡಿತ್ತು. ಆದರೆ, ಮುಖ್ಯೋಪಾಧ್ಯಾಯರು ತನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು.

ಆನಂತರ ತನ್ನಿಂದ 50 ಸಾವಿರ ರೂ. ಕೇಳಿದ್ದರು ಎಂದು ಮತ್ತೊಂದು ದೂರು ನೀಡಿದ್ದರು. ಬಳಿಕ 2020ರ ಜೂನ್‍ನಲ್ಲಿ ಎಸ್‍ಸಿ ಮತ್ತು ಎಸ್‍ಸಿ ದೌರ್ಜನ್ಯ ತಡೆ ಕಾಯಿದೆಯಡಿ ತಮ್ಮ ಮೆಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮೂರನೇ ದೂರು ದಾಖಲಿಸಿದ್ದರು. ಈ ಮೂರು ದೂರುಗಳನ್ನು ಬೇರೆ ಬೇರೆ ಪೆÇಲೀಸ್ ಠಾಣೆಗಳಲ್ಲಿ ದಾಖಲಿಸಿದ್ದರು ಮತ್ತು ಬೇರೆ ಬೇರೆಯವರನ್ನು ತನ್ನ ಪರ ಸಾಕ್ಷಿಗಳೆಂದು ನಮೂದಿಸಿದ್ದರು. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News