ದಾವಣಗೆರೆ: ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಜಾಲ ಬಯಲಿಗೆ
ದಾವಣಗೆರೆ, ಜು.18: ನಗರದ ಹೊರವಲಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಪೊಲೀಸರು 25.75 ಲಕ್ಷ ಮೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗೋವಿಂದ ಬಡಾವಣೆ ನಿವಾಸಿಗಳಾದ ಮಾರುತಿ, ಶಿವರಾಜ್ ಲಮಾಣಿ, ಸುನೀಲ್ ಲಮಾಣಿ, ಮನೋಜ್ ಲಮಾಣಿ, ಅಭಿಷೇಕ ಹಾಗೂ ಮಹಾಂತೇಶ ಬಂಧಿತ ಆರೋಪಿಗಳು.
ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಡಾಲರ್ಸ್ ಕಾಲನಿಯ ಡಾ.ತಿಪ್ಪೇಸ್ವಾಮಿ ಎಂಬ ವೈದ್ಯ ಕಳೆದ ಜೂನ್ 4ರಂದು ಮನೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ತೆರಳಿದ್ದರು. ಈ ಅವಧಿಯಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 31 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಕಳವು ಮಾಡಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಡಾ.ತಿಪ್ಪೇಸ್ವಾಮಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಹೆದ್ದಾರಿ ಬಡಾವಣೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆರು ಮಂದಿಯ ತಂಡವನ್ನು ಹಚ್ಚಿದ್ದಾರೆ. ಇವರಿಂದ 25.75 ಲಕ್ಷ ರೂ. ಮೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಯಂಗ್ ಸ್ಟಾರ್ ಗ್ಯಾಂಗ್ ಎಂಬ ಹೆಸರಿನಲ್ಲಿ ಕೃತ್ಯ ಎಸಗುತ್ತಿದ್ದ ಈ ತಂಡ, ಹೆದ್ದಾರಿ ಪಕ್ಕದ ಜನ ವಸತಿ ಪ್ರದೇಶದಲ್ಲಿ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಬೈಕ್ನ ಹಿಂದೆ ಮಹಿಳೆಯರನ್ನು ಕುರಿಸಿಕೊಂಡು ಸುತ್ತಾಡಿ ಯಾರು ಎಲ್ಲಿಗೆ ಹೋಗುತ್ತಾರೆ? ಯಾರ ಮನೆಗೆ ಬೀಗ ಹಾಕಿದೆ? ಎಂಬ ಮಾಹಿತಿ ಕಲೆ ಹಾಕುತ್ತಿತ್ತು. ಬಳಿಕ ಈ ಗ್ಯಾಂಗ್ ತಡರಾತ್ರಿ ಅಂತಹ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿತ್ತು. ಜೊತೆಗೆ ಒಂಟಿ ಮಹಿಳೆಯರಿರುವ ಮನೆಗಳಿಗೆ ನುಗ್ಗಿ ಚಿನ್ನಾಭರಣ ಸೆಳೆಯುತ್ತಿತ್ತು. ಕಳ್ಳತನದ ಜೊತೆಗೆ ಸಿಸಿಟಿವಿ ಕ್ಯಾಮರಾ ಡಿವಿಆರ್ ತೆಗೆದುಕೊಂಡು ಕೊಂಡೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.