ಪ್ರಕೃತಿ ಮಡಿಲಲ್ಲಿ ‘ಅಪರಿಚಿತ ಓದುಗರ’ ಓದಿನ ಕ್ರಾಂತಿ

Update: 2023-10-30 09:23 GMT

ಬೆಂಗಳೂರು, ಅ.30: ಓದುಗರಿಗಿಂತ ಬರೆಯುವವರೇ ಹೆಚ್ಚಿದ್ದಾರೆ ಎಂಬ ಮಾತು ಕೆಲವು ವರ್ಷಗಳಿಂದ ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ‘ದಯವಿಟ್ಟು ಗಮನಿಸಿ’ ಹೆಸರಿನ ಮೂಲಕ ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣದಲ್ಲಿ ‘(ಅ)ಪರಿಚಿತ ಓದುಗರು’ ಎಂಬ ಸಾಹಿತ್ಯಾಸಕ್ತರ ತಂಡ ಸದ್ದು ಮಾಡುತ್ತಿದೆ.

ಇದೊಂದು ಕನ್ನಡ ಓದುಗರ ತಾಣ. ಈ ತಂಡವು ಅವ್ವ ಪುಸ್ತಕಾಲಯ ಎನ್ನುವ ಸಂಸ್ಥೆಯ ಆಯೋಜಕತ್ವದಲ್ಲಿ ಅದರ ಮುಖ್ಯಸ್ಥ, ಯುವ ಲೇಖಕ ಅನಂತ್ ಕುಣಿಗಲ್ ಅವರಿಂದ ರೂಪುಗೊಂಡು ಪ್ರಸ್ತುತ 500ಕ್ಕೂ ಹೆಚ್ಚು ಓದುಗರ ಸಾಹಿತ್ಯಿಕ ವಲಯವಾಗಿ ಹೊರಹೊಮ್ಮಿದೆ.

ಕೊರೋನ ಬಳಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನರ ಸಂಖ್ಯೆ ದಿಢೀರ್ ಕುಸಿದಿತ್ತು. ಈ ಕಾರ್ಯಕ್ರಮಗಳಲ್ಲಿ ಕಂಡ ಮುಖಗಳೇ ಕಾಣುತ್ತಿದ್ದವು. ಅವರೆಲ್ಲರನ್ನು ಒಟ್ಟುಗೂಡಿಸಿ ಸಾಹಿತ್ಯದ ಮೂಲಕ ಕನ್ನಡ ಕಟ್ಟುವ ಕೆಲಸ ನನ್ನದಾಗಿತ್ತು. ಆ ಪ್ರಯೋಗದ ಪ್ರತಿಫಲವೇ ‘ಅಪರಿಚಿತ ಓದುಗರು’ ತಂಡದ ಹುಟ್ಟಿಗೆ ಕಾರಣ ಎನ್ನುತ್ತಾರೆ ತಂಡದ ಮುಖ್ಯಸ್ಥ ಅನಂತ್ ಕುಣಿಗಲ್.

ಈ ತಂಡದಿಂದ ಪ್ರತಿ ತಿಂಗಳಿಗೆ ಒಂದು ಭಾನುವಾರ ಬೆಂಗಳೂರಿನ ಕಬ್ಬನ್‍ಪಾರ್ಕ್‍ನಲ್ಲಿ ಎಲ್ಲ ಆಸಕ್ತ ಓದುಗರನ್ನು ಒಗ್ಗೂಡಿಸಿ ಪ್ರಕೃತಿ ನಡುವೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇಷ್ಟದ ಕನ್ನಡ ಪುಸ್ತಕ ಓದು, ಹರಟೆ, ಅಪರಿಚಿತರ ಭೇಟಿ, ಕವಿತೆ ವಾಚನ, ರಸಪ್ರಶ್ನೆ ಸ್ಪರ್ಧೆ, ಹಾಡುಗಾರಿಕೆ, ಪುಸ್ತಕ ವಿನಿಮಯ, ವಿಶೇಷ ಉಡುಗೊರೆಗಳು, ಪುಸ್ತಕ ಬಿಡುಗಡೆ, ಲೇಖಕರ ಪರಿಚಯ, ಕೃತಿಯ ಹಿಂದಿನ ಕಥೆ, ಅನುಭವ ಕಥನ, ಚಾರಣ.. ಹೀಗೆ ಹಲವು ಸಾಹಿತ್ಯ ವಿಚಾರಗಳು ‘ಅಪರಿಚಿತ ಓದುಗರು’ ಕಾರ್ಯಕ್ರಮದಲ್ಲಿ ನಡೆಯುತ್ತದೆ. ಇದೇ ವರ್ಷ ಜುಲೈನಲ್ಲಿ ಪ್ರಾರಂಭಿಸಿದ್ದು, ಈವರೆಗೆ ಒಂದು ಪ್ರವಾಸ ಸೇರಿ, ಐದಾರು ಕಾರ್ಯಕ್ರಮಗಳು ಜರುಗಿದ್ದು, 500ಕ್ಕೂ ಹೆಚ್ಚು ಓದುಗರು ಭಾಗವಹಿಸಿದ್ದಾರೆ ಎಂದು ಹೇಳುತ್ತಾರೆ ಅನಂತ್.

ಬಹುತೇಕ ಓದುಗರು ತಾವು ಓದಿದ್ದನ್ನು ಇನ್ನೊಬ್ಬ ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಈ ಬಿಡುವಿಲ್ಲದ ಬದುಕಿನಲ್ಲಿ ಅಂತಹ ಸಮಾನ ಮನಸ್ಕರನ್ನು ಹುಡುಕಿ, ಭೇಟಿಯಾಗಿ ಸಮಯ ಕಳೆಯುವುದೇ ಕಷ್ಟದ ಕೆಲಸ. ಹಾಗಾಗಿ ಹರಟಿಸಲು ಯಾರಾದರೇನು, ಒಟ್ಟಿನಲ್ಲಿ ಸಾಹಿತ್ಯಾಸಕ್ತಿ ಇದ್ದರೆ ಆಯಿತು ಎಂದುಕೊಂಡು ಒಬ್ಬರಿಗೊಬ್ಬರು ಪರಿಚಯ ಇಲ್ಲದವರನ್ನೇ ಸೇರಿಸುತ್ತಿದ್ದೇವೆ. ಪುಸ್ತಕ ಒಳ್ಳೆಯ ಗೆಳೆಯ. ಅಂತಹ ಗೆಳೆಯನಿಂದ ಮತ್ತೊಬ್ಬ ಒಳ್ಳೆ ಗೆಳೆಯ ಸಿಗುವುದಿದೆಯಲ್ಲಾ ಅದು ಅಪರೂಪದ ಸಂಗತಿ. 14 ಜನ ಓದುಗರಿಂದ ಮೊದಲನೆ ಕಾರ್ಯಕ್ರಮ ನಡೆಯಿತು. ಈಗ ಇನ್‍ಸ್ಟಾಗ್ರಾಮ್‍ನ ಅಪರಿಚಿತ ಓದುಗರು ಪೇಜ್‍ಗೆ 26 ಸಾವಿರಕ್ಕೂ ಹೆಚ್ಚು ಜನ ಹಿಂಬಾಲಕರಿದ್ದಾರೆ. ವಾಟ್ಸಪ್, ಟೆಲಿಗ್ರಾಮ್ ಗ್ರೂಪ್‍ಗಳಲ್ಲಿ 3000ಕ್ಕೂ ಹೆಚ್ಚು ಜನರಿದ್ದಾರೆ. ಅವರೆಲ್ಲರ ಪ್ರೀತಿ ಸಿಕ್ಕಿದೆ ಎನ್ನುತ್ತಾರೆ ಅನಂತ್.

 ಕನ್ನಡಿಗರು, ಸಾಹಿತ್ಯ ಆಸಕ್ತಿಯುಳ್ಳವರು, ವಿವಿಧ ಜಿಲ್ಲೆಗಳ ಓದುಗರು, ನಗರದಲ್ಲಿನ ವಿದೇಶಿಗರು ಸೇರಿದಂತೆ ಬೆಂಗಳೂರಿನ ನಾನಾ ಮೂಲೆಯಿಂದ ಬರುತ್ತಾರೆ. ಯಾವುದೇ ವಯಸ್ಸಿನ ಮಿತಿ ಇಲ್ಲ ಎಲ್ಲಾ ವರ್ಗದ ವಯಸ್ಸಿನವರಿಗೂ ಅವಕಾಶವಿದ್ದು, ಇದಕ್ಕೆ ಯಾವುದೇ ಹಣದ ಖರ್ಚಿನ ಗೊಡವೆ ಇಲ್ಲ. ಎಲ್ಲ ಹೊಸಬರು, ಹಳಬರು ಸೇರಿಕೊಂಡು ಕಬ್ಬನ್ ಪಾರ್ಕ್‍ನ ಹಚ್ಚಹಸಿರಿನ ಪರಿಸರದ ನಡುವೆ ಕೂತು ಓದುವುದೇ ಒಂದು ರೀತಿಯ ಆಹ್ಲಾದಕರ ಕ್ಷಣ. ಎಲ್ಲರೂ ಅವರವರ ಪಾಡಿಗೆ ಇಷ್ಟದ ಪುಸ್ತಕ ತಂದು ಓದುತ್ತಾರೆ. ನಂತರ ಒಂದೆಡೆ ಕೂತು ಪರಸ್ಪರ ಚರ್ಚೆ ಶುರುಮಾಡುತ್ತೇವೆ. ಮತ್ತು ಪ್ರತಿ ಭೇಟಿಯಲ್ಲಿ ಒಬ್ಬ ಅಥವಾ ಇಬ್ಬರು ಲೇಖಕರನ್ನು ಆಹ್ವಾನಿಸುತ್ತೇವೆ. ಅವರೊಂದಿಗೆ ಓದುಗರು ಸಂವಹನ ನಡೆಸುತ್ತಾರೆ ಎಂದು ವಿವರಿಸುತ್ತಾರೆ ಅನಂತ್.

ನಮ್ಮ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬಳಿಕ ಎಲ್ಲರಿಂದ ವ್ಯಾಪಕ ಮೆಚ್ಚುಗೆ ದೊರೆಯಿತು. ಹಿರಿಯ ಸಾಹಿತಿಗಳೂ ಪ್ರಶಂಸೆ ವ್ಯಕ್ತಪಡಿಸಿದರು. ಹೀಗೆ ಬಾಯಿಂದ ಬಾಯಿಗೆ, ಫೋನಿಂದ ಫೋನಿಗೆ ವಿಷಯ ಹಬ್ಬುತ್ತಾ ತಂಡದ ವ್ಯಾಪ್ತಿ ಬೆಳೆಯುತ್ತಲೇ ಇದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರಿನ ಓದುಗನೊಬ್ಬ ಈಗ ಅಲ್ಲೇ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗೆ ಹುಬ್ಬಳ್ಳಿ, ಬೆಳಗಾವಿ, ಕೊಪ್ಪಳ, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಕಡೆಗಳಲ್ಲೂ ಓದುಗರು ಆಸಕ್ತರನ್ನು ಸೇರಿಸಿ ಕಾರ್ಯಕ್ರಮಗಳನ್ನು ರೂಪಿಸಲಾರಂಭಿಸಿದ್ದಾರೆ. ಇದಕ್ಕೆ ತಂಡದ ಪ್ರಾಯೋಜಕತ್ವ, ಸಹಕಾರವಿದೆ ಎಂದು ಅನಂತ್ ತಿಳಿಸಿದ್ದಾರೆ.

ಇತ್ತೀಚೆಗೆ ತಂಡದಿಂದ ಕುಪ್ಪಳ್ಳಿಗೆ ಪ್ರವಾಸ ಕೈಗೊಳ್ಳಲಾಗಿತ್ತು. ಅಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ನಡೆಸಿದೆವು. ಹೀಗೆಯೇ ಪ್ರತಿ ಮೂರು ತಿಂಗಳಿಗೊಂದು ಪ್ರವಾಸ ಏರ್ಪಡಿಸಲಾಗುತ್ತದೆ. ಅಲ್ಲಿ ಸಾಹಿತ್ಯಕ್ಕೆ ಹೊರತುಪಡಿಸಿ ಏನನ್ನೂ ಮಾಡುವುದಿಲ್ಲ. ಕಣಕಣದಲ್ಲೂ ಕನ್ನಡತನ ತುಂಬಿರುತ್ತದೆ. ಇಡೀ ತಂಡ ಪ್ರಕೃತಿ ಸವಿಯುತ್ತಾ ಅದರ ನಡುವೆ ಪುಸ್ತಕ ಹಿಡಿದುಕೊಂಡು ಕಳೆದುಹೋಗುತ್ತೇವೆ. ನಾವೇ ಅಡುಗೆ ಮಾಡಿಕೊಂಡು ಒಟ್ಟಿಗೆ ಕೂತು ಊಟ ಮಾಡುತ್ತೇವೆ. ಎನ್.ಎಸ್.ಎಸ್ ಕ್ಯಾಂಪ್‍ನಂತೆ ನಮ್ಮದೂ ಒಂಥರಾ ಬುಕ್ ಕ್ಯಾಂಪ್!. ನಮ್ಮ ತಂಡದ ಉದ್ದೇಶ ಒಳ್ಳೆಯ ಓದುಗರನ್ನು ಹುಟ್ಟುಹಾಕುವುದು, ಒಂದೆಡೆ ಸೇರಿಸಿ ಓದಿಸುವುದು ಮತ್ತು ಓದುಗರ, ಬರಹಗಾರರ ನಡುವೆ ಸೇತುವೆಯಾಗಿ ಇರೋದು ಎನ್ನುತ್ತಾರೆ ಅನಂತ್.

 

‘ಅಪರಿಚಿತ ಓದುಗರು' ನಿಜಕ್ಕೂ ಒಂದು ಹೊಸ ರೀತಿಯ ಪ್ರಯತ್ನ. ಓದಿನ ಆಸಕ್ತರನ್ನೆಲ್ಲ ಒಂದೆಡೆ ಸೇರಿಸಿ ಪರಸ್ಪರರಿಗೆ ಸಹೃದಯರನ್ನು ಪರಿಚಯಿಸುವ ವಿಶಿಷ್ಟ ಪ್ರಯೋಗ. ಕಬ್ಬನ್ ಪಾರ್ಕ್‍ನಲ್ಲಿ ಈಗಾಗಲೆ ಸ್ಪೇಸ್ ಆಕ್ಯುಪೈ ಮಾಡಿರುವ ಕನ್ನಡೇತರ ಪುಸ್ತಕಗಳನ್ನು ಒಳಗೊಂಡ ‘ಕಬ್ಬನ್ ರೀಡ್ಸ್'ಗೆ ಸಂವಾದಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮಹತ್ವವೂ ಇದೆ ಎಂದುಕೊಳ್ಳುತ್ತೇನೆ. ಇಲ್ಲಿ ನಡೆಯುವ ಓದು, ಮಾತುಕತೆಗಳು ಪಾಪ್ಯುಲರ್ ಲೇಖಕರು, ಪುಸ್ತಕಗಳಿಗೆ ಸೀಮಿತಗೊಳ್ಳದೆ ವಿಸ್ತಾರಗೊಂಡು ಬೆಳೆಯಲಿ ಎಂದು ಅಭಿನಂದಿಸುತ್ತಾರೆ ಕಥೆಗಾರ ಮಂಜುನಾಯಕ್ ಚೆಳ್ಳೂರು.

--------------------------------------------------------------------------------------

ʼʼಕಬ್ಬನ್ ಪಾರ್ಕಿನಲ್ಲಿ ಒಂದು ರವಿವಾರ ಕುತೂಹಲದಿಂದ ನಾನು ಹೋದಾಗ ಅಲ್ಲಿ ಎಷ್ಟೊಂದು ಜನ ಪುಸ್ತಕ ಪ್ರೇಮಿಗಳಿದ್ದರು. ಹೊಸದಾಗಿ ಓದಿಗೆ ತೆರೆದುಕೊಳ್ಳಬೇಕೆಂಬ ಆಕಾಂಕ್ಷಿಗಳಿಂದ ಹಿಡಿದು ಓದಿನರುಚಿ ಕಂಡ ಹಿರಿಕಿರಿಯರ ಸಂಗಮ. ಓದುಗರು ಅವರಿಷ್ಟದ ಪುಸ್ತಕ ತಂದು, ನೆರಳಿನ ಹುಲ್ಲುಹಾಸಿನ ಮೇಲೆ ಕುಳಿತು ಅವರವರ ಪಾಡಿಗೆ ಓದಬಹುದು. ತಮ್ಮ ಓದಿನ ಅನುಭವಗಳನ್ನು ಹಂಚಿಕೊಳ್ಳಬಹುದು. ಹೊಸ ಲೇಖಕರನ್ನು ಪರಿಚಯಿಸಿಕೊಳ್ಳಬಹುದು, ಈ ಎಲ್ಲ ಚಟುವಟಿಕೆಗಳ ಮಹತ್ವ್ವದ ಭಾಗವೆಂದರೆ ಈಗಾಗಲೇ ಲೇಖಲೋಕದಲ್ಲಿ ನೆಲೆನಿಂತ ಅನುಭವಿಯೊಬ್ಬರನ್ನು ಕರೆದು ಅವರಿಂದ ಅಪರಿಚಿತ ಓದುಗರಿಗೆ ಓದಿನ ದಾರಿಗಳ ಬಗ್ಗೆ ಮಾರ್ಗದರ್ಶಕಪ್ರಾಯದ ಮಾತುಗಳನ್ನು ಕೇಳಿಸುವುದು. ಬಂದವರು ಪ್ರೀತಿಯಿಂದ ಮಾತುಗಳನ್ನು ಕೇಳುವುದು, ತಮ್ಮ ಮಾತುಗಳನ್ನು ಸೇರಿಸುವುದು, ಸಂವಾದ ಎಲ್ಲವೂ ಮುಗಿಯುವಷ್ಟರಲ್ಲಿ ಅಪರಿಚಿತ ಓದುಗರ ನಡುವೆ ಸ್ನೇಹ ವರ್ತುಲವೊಂದು ಆವರಿಸುತ್ತದೆ. ಈ ಬಗೆಯ ಎಲ್ಲ ಚಟುವಟಿಕೆಗಳನ್ನು ನಾನು ಅಲ್ಲಿದ್ದು ನೋಡಿ ಖುಷಿಪಟ್ಟೆ. ಪುಸ್ತಕಗಳ ಉಡುಗೊರೆ ಪಡೆದು ಮನೆಗೆ ಬಂದೆ. ಹೊಸತಲೆಮಾರಿನ ಬರಹಗಾರರ ಈ ಬಗೆಯ ಸಾಹಿತ್ಯ ಪರಿಚಾರಿಕೆಯನ್ನು ತೆರೆದ ಮನದಿಂದ ನಾವು ಬೆಂಬಲಿಸಬೇಕುʼʼ

- ಡಾ.ಎಚ್.ಎಸ್.ಸತ್ಯನಾರಾಯಣ, ಲೇಖಕರು.

-----------------------------------------------------------------

ʼʼ ಪುಸ್ತಕ ಪ್ರೇಮಿಗಳನ್ನು ವಾರಾಂತ್ಯದಲ್ಲಿ ಒಂದೇ ಹುಲ್ಲುಹಾಸಿನ ಮೇಲೆ ಸೇರಿಸುವ ಅದ್ಭುತ ಪ್ರಯತ್ನವೇ ‘ಅಪರಿಚಿತ ಓದುಗರು’. ಮನೆಯಲ್ಲಿ ಓದಲು ಕುಳಿತರೆ ನೂರಾರು ಕೆಲಸಗಳು ಬರುತ್ತವೆ, ಅದೇ ಓದುವುದನ್ನೇ ಕೆಲಸ ಎಂದುಕೊಂಡು ಮನೆಯಿಂದ ಹೊರಗೆ ಬಂದು ಕೂತಾಗ ಅಕ್ಷರಗಳು ಮತ್ತು ನಮ್ಮ ಮಧ್ಯೆ ಯಾವುದೇ ಬೇಲಿಯಿರುವುದಿಲ್ಲ. ಎಷ್ಟೋ ದಿನಗಳಿಂದ ಓದಬೇಕು ಎಂದುಕೊಂಡು, ಸಮಯವಾಗದೇ ಬಿಟ್ಟಿದ್ದ ಪುಸ್ತಕವನ್ನು ಇತರ ಅಪರಿಚಿತ ಓದುಗರ ಜೊತೆಗೆ ಕೂತು ಕಬ್ಬನ್ ಪಾರ್ಕಿನ ಪರಿಸರದ ಮಧ್ಯೆ ಒಂದೇ ಗುಕ್ಕಿಗೆ ಓದಿ ಮುಗಿಸಿದಾಗ ಎಲ್ಲೋ ಕಳೆದುಹೋಗಿದ್ದ ನನ್ನದೇ ಒಂದು ಭಾಗವನ್ನು ಮತ್ತೆ ಪಡೆದುಕೊಂಡಂತೆ ಅನ್ನಿಸಿತು. ನಾನೂ ಒಬ್ಬ ಬರಹಗಾರನಾಗಿ ಮುಂದೊಂದು ದಿನ ಯಾರೋ ನನ್ನ ಪುಸ್ತಕವನ್ನೂ ಇಷ್ಟೇ ಶ್ರದ್ಧೆಯಿಂದ ಇದೇ ಜಾಗದಲ್ಲಿ ಕೂತು ಓದುತ್ತಾರೆ ಎನ್ನುವ ಸಾಧ್ಯತೆಯೇ ಪುಳಕಗೊಳಿಸಿತು. ಅಲ್ಲಿ ಸೇರಿದ್ದ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಬಗೆಯ ಪುಸ್ತಕ, ಒಬ್ಬೊಬ್ಬರಿಗೆ ಓದು ಎನ್ನುವುದು ಒಂದೊಂದು ರೀತಿಯ ವಿಮೋಚನೆ, ಕುಳಿತು ಚರ್ಚಿಸುತ್ತಿದ್ದರೆ ಬೇರೆ ಬೇರೆ ಪೀಳಿಗೆಗಳ ಆಲೋಚನಾಲಹರಿಗಳೊಳಗೆ ಒಮ್ಮೆ ಇಣುಕಿ ಬಂದಂತಹಾ ಅನುಭವ. ಬರೆಯುವುದರಿಂದ ಕ್ರಾಂತಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಓದುವುದರಿಂದಂತೂ ಕ್ರಾಂತಿಯಾಗುತ್ತದೆ. ಈ ಓದುವ ಕ್ರಾಂತಿಯ ದೀಪದ ಎಣ್ಣೆ ಎಂದೂ ಆರದಿರಲಿʼʼ

- ಸಂಪತ್ ಸಿರಿಮನೆ, ಚಿತ್ರ ಸಾಹಿತಿ.

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಯೋಗೇಶ್ ಮಲ್ಲೂರು

contributor

Similar News