ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ 25ಸಾವಿರ ರೂ.ಫೆಲೋಶಿಪ್ ನೀಡಲು ಮನವಿ
ಬೆಂಗಳೂರು: ಪಿಎಚ್.ಡಿ., ಎಂ.ಫಿಲ್ ಸಂಶೋಧನೆ ನಡೆಸುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ವತಿಯಿಂದ ಪ್ರತಿ ತಿಂಗಳು ನೀಡಲಾಗುತ್ತಿದ್ದ 25 ಸಾವಿರ ರೂ.ಗಳ ಪ್ರೋತ್ಸಾಹ ಧನ ಮತ್ತು 10ಸಾವಿರ ರೂ.ನಿರ್ವಹಣಾ ವೆಚ್ಚವನ್ನು ಮುಂದುವರೆಸಬೇಕು ಎಂದು ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಪಿಎಚ್.ಡಿ., ಎಂ.ಫಿಲ್ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಆಗ್ರಹಿಸಿದೆ.
ಬುಧವಾರ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿರುವ ವಿದ್ಯಾರ್ಥಿಗಳ ವೇದಿಕೆಯು, ಎಂ.ಫಿಲ್., ಪಿಎಚ್.ಡಿ ಸಂಶೋಧನಾರ್ಥಿಗಳಿಗೆ ಫೆಲೋಷಿಪ್ ಯೋಜನೆಯ ಮುಂದುವರೆದ ಭಾಗವಾಗಿ ಹೊಸ ಅರ್ಜಿಗಳನ್ನು ತಕ್ಷಣದಲ್ಲಿಯೆ ಕರೆದು 2017ರ ಜ.24ರ ಸರಕಾರದ ಆದೇಶಕ್ಕೆ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ.
ಈಗಾಗಲೇ ಪಿಎಚ್.ಡಿ. ಫೆಲೋಶಿಪ್ ಗಾಗಿ 2021ರ ಫೆ.19 ಹಾಗೂ 2022ರ ಆ.26ರಂದು ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೆ ಅಂದರೆ 2018 ಹಾಗೂ 2019ರ ಶೈಕ್ಷಣಿಕ ಸಾಲಿಗೆ ಪೂರ್ವಾನ್ವಯವಾಗುವಂತೆ ಮಾನ್ಯತೆ ಮಾಡಿ ಕೂಡಲೇ 3 ವರ್ಷ ಪೂರ್ಣಾವಧಿಯ ಫೆಲೋಶಿಪ್ ಬಿಡುಗಡೆ ಮಾಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಕೇವಲ 2 ವರ್ಷಗಳ ಅವಧಿಗೆ ಮಾತ್ರ ಪಿಎಚ್.ಡಿ. ಫೆಲೋಶಿಪ್ ಪಡೆಯಬಹುದೆಂದು ಸೂಚಿಸಲಾದ ವಿದ್ಯಾರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಿಗೆ ಸಮನಾಗಿ 3 ವರ್ಷಗಳವರೆಗೆ ನೀಡಬೇಕು ಹಾಗೂ ಈಗಾಗಲೇ ಪಡೆಯುತ್ತಿರುವ ಅಭ್ಯರ್ಥಿಗಳ ಅವಾರ್ಡ್ ಲೆಟರ್ ಗಳಲ್ಲಿನ ತಾರತಮ್ಯದ ಅವಧಿಗಳ ಗೊಂದಲವನ್ನು ಪರಿಹರಿಸಿ, ಪೂರ್ಣಾವಧಿಗೆ ಫೆಲೋಷಿಪ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿ, ವಿಜಯನಗರ, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 2018 ಹಾಗೂ 2019ರ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಅರ್ಜಿಗಳನ್ನು ಸ್ವೀಕೃತಗೊಳಿಸಿದರೂ ಯಾವುದೇ ಫೆಲೋಶಿಪ್ ನೀಡದೆ ವಿಳಂಬ ನೀತಿಯನ್ನು ಅನುಸರಿಸಲಾಗಿದೆ. ಅನೇಕ ಬಾರಿ ಇಲಾಖೆಯ ನಿರ್ದೇಶಕರು ಹಾಗೂ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಸಾಲದ ಹೊರೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅನುದಾನವನ್ನು ಸಕಾಲಕ್ಕೆ ಬಿಡುಗಡೆಗೊಳಿಸಬೇಕು ಎಂದು ವೇದಿಕೆ ಮನವಿ ಮಾಡಿದೆ.
ವಿದ್ಯಾರ್ಥಿಗಳ ನಿಯೋಗದಲ್ಲಿ ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಾದ ಖಾಸಿಂ ಅಲಿ ಜಿ. ಹುಜರತಿ, ಇಲಿಯಾಸ್ ಎಂ., ಸೈಯದ್ ಬಿ ಮಕಾನದಾರ್, ಇಸ್ಮಾಯಿಲ್ ಖಾದ್ರಿ, ಪರ್ವೀನ್ ಬೇಗಂ, ದಾದಾ ಹಯಾತ್ ಬಾವಾಜಿ, ಸೈಯದ್ ಶೋಯಬ್ ಖಾಸಿಂ ಹಾಗೂ ಅಝರುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.