ಅಂಗವಿಕಲರ ಕೈಬಿಟ್ಟು ಆರೋಗ್ಯ ಸಮೀಕ್ಷೆ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

Update: 2023-08-08 16:45 GMT

ಬೆಂಗಳೂರು, ಆ.8: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–6ರಲ್ಲಿ (ಎನ್‍ಎಫ್‍ಎಚ್‍ಎಸ್-6) ಯಾವ ಯಾವ ರೀತಿಯ ಅಂಗವಿಕಲತೆ ಇದೆ ಎಂಬುದನ್ನು ಗುರುತಿಸುವ ಗೋಜಿಗೆ ಹೋಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಜಾವೇದ್ ಅಬಿದಿ ಪ್ರತಿಷ್ಠಾನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ವಿವಿಧ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಎನ್‍ಎಫ್‍ಎಚ್‍ಎಸ್-6ರಲ್ಲಿ ಅಂಗವಿಕಲರನ್ನು ಹೊರಗಿಡಲಾಗಿದೆ. ಗಣತಿದಾರರಿಗೆ ಅಂಗವೈಕಲ್ಯದ ಬಗ್ಗೆ ಕೇಳಲು, ಮೌಲ್ಯಮಾಪನ ಮಾಡಲು ತರಬೇತಿ ಅಥವಾ ಅರ್ಹತೆ ಇಲ್ಲ. ಹೀಗಾಗಿ, ಅಂಗವಿಕಲರ ಹಕ್ಕುಗಳ ಕಾಯ್ದೆ (ಆರ್‍ಪಿಡಬ್ಲ್ಯುಡಿ)–2016ರ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ 21 ಅಂಗವೈಕಲ್ಯಗಳನ್ನು ಎನ್‍ಎಫ್‍ಎಚ್‍ಎಸ್-6ರ ಪ್ರಶ್ನಾವಳಿಯಲ್ಲಿ ಸೇರ್ಪಡೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News