ಬಿಜೆಪಿಯಿಂದ ದೇವರ ದುರ್ಬಳಕೆ: ರೈತ ನಾಯಕ ರಾಕೇಶ್ ಟಿಕಾಯತ್

Update: 2023-09-05 17:20 GMT

ಬೆಂಗಳೂರು, ಸೆ.5:ಚುನಾವಣೆ ಸಂದರ್ಭದಲ್ಲಿ ಆಯಾ ರಾಜ್ಯಕ್ಕೆ ಅನುಕೂಲವಾಗುವಂತೆ ಬಿಜೆಪಿ ಪಕ್ಷವೂ ದೇವರನ್ನೆ ಕಳುಹಿಸಿ, ರಾಜಕೀಯ ಮಾಡಲು ಆರಂಭಿಸಿದೆ ಎಂದು ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಟೀಕಿಸಿದ್ದಾರೆ.

ಮಂಗಳವಾರ ನಗರದ ಪುರಭವನ ಸಭಾಂಗಣದಲ್ಲಿ ನಮ್ಮೆಲ್ಲರ ನಲ್ಮೆಯ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಗಲಿಯ ಆರು ವರ್ಷಗಳ ನೆನಪಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ "ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ" ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಇತರೆ ರಾಜ್ಯಗಳಲ್ಲಿ ಶ್ರೀರಾಮ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತಿತ್ತು.ಆದರೆ, ಕರ್ನಾಟಕದಲ್ಲಿ ಶ್ರೀರಾಮನ ಬದಲು ಆಂಜನೇಯ ದೇವರ ಹೆಸರಿನಲ್ಲಿ ರಾಜಕೀಯ ಆರಂಭಿಸಿದರು.ಆದರೆ, ಇದು ಫಲ ನೀಡಲಿಲ್ಲ. ಹೀಗೆ, ಅವಶ್ಯಕತೆಗೆ ತಕ್ಕಂತೆ ಬಿಜೆಪಿ ಆಯಾ ರಾಜ್ಯಗಳಲ್ಲಿ ದೇವರುಗಳನ್ನೆ ಕಳುಹಿಸಿ ರಾಜಕೀಯ ಮಾಡುತ್ತಿದೆ ಎಂದರು.

ಕರ್ನಾಟಕದ ಜನರು ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ, ಇದಕ್ಕಾಗಿ ಅಭಿನಂದನೆಗಳು. ಈಗ ಬೇರೆ ರಾಜ್ಯಗಳಲ್ಲೂ ಇದೇ ಪುನರಾವರ್ತನೆಯಾಗಬೇಕು. ನಮ್ಮನ್ನು ಆಳುತ್ತಿರುವವರು ಹೊರದೇಶಗಳಲ್ಲಿ ಗಾಂಧಿಯ ಹೆಸರು ಬಳಕೆ ಮಾಡುತ್ತಾರೆ. ಆದರೆ, ಅವರನ್ನು ಕೊಂದವರು ಯಾರು? ಗೌರಿ ಲಂಕೇರ್ಶ ಅವರನ್ನು ಹತ್ಯೆ ಮಾಡಿದವರು ಯಾರು ಎಂದು ಬಾಯಿಬಿಡುವುದಿಲ್ಲ ಎಂದ ಅವರು, ಮಣಿಪುರದಲ್ಲಿ ಪರಸ್ಪರ ಗಲಭೆ ಮಾಡಿಸುತ್ತಾರೆ. ಅಲ್ಲಿ, ಇಡೀ ಜಗಳ ಗಣಿಗಾರಿಕೆಗಾಗಿ ನಡೆಸಲ್ಪಡುತ್ತಿದೆ. ಅದನ್ನು ಅದಾನಿಗೆ ಕೊಡಲು ಯತ್ನಿಸುತ್ತಿದ್ದಾರೆ. ಅದೇ ರೀತಿ, ಕಾಶ್ಮೀರದ ಪ್ರವಾಸೋದ್ಯಮ ನಷ್ಟದಲ್ಲಿದ್ದು, ಸರಿ ಸುಮಾರು 50 ಸಾವಿರ ಕೋಟಿ ವಾಹಿವಾಟು ಗಳಿಸುತ್ತಿದ್ದ ರೈತರು, 2 ಸಾವಿರ ಕೋಟಿ ರೂಪಾಯಿಗೆ ತಲುಪಿದ್ದಾರೆ. ಇದರ ಹಿಂದೆ ಉದ್ಯಮಿಗಳ ಕೈವಾಡ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಹಿಂಸೆಯ ವಾತಾವರಣ ರೂಪುಗೊಂಡಿದೆ. ಗೌರಿ ಲಂಕೇಶ್ ಕೂಡಾ ಇದಕ್ಕೆ ಬಲಿಯಾದರು. ಈ ರೀತಿಯ ಕೃತ್ಯಗಳು ಹಲವು ವರ್ಷಗಳಿಂದಲೇ ನಡೆಯುತ್ತಿವೆ. 2015ರಲ್ಲಿ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ಗಲಭೆಯಾಯಿತು. 2017ರಲ್ಲಿ ಗೌರಿ ಬಲಿಯಾದರು. ಇದು ಮುಂದುವರೆದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News