ಸಾಕ್ಷ್ಯ ಇಟ್ಟುಕೊಂಡು ಆರೋಪ ಮಾಡಬೇಕು: ಹೆಚ್‌ಡಿಕೆ ವಿರುದ್ಧ ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ
ಮೈಸೂರು: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆ ವಿಚಾರದಲ್ಲಿ ದಂಧೆ ಮಾಡುತ್ತಿದ್ದರು ಅನ್ನಿಸುತ್ತಿದೆ. ಅದಕ್ಕೆ ಅವರು ಯಾವುದೇ ವಿಚಾರವನ್ನು ದಂಧೆ ಎಂದು ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು " ಸಿ.ಎಸ್.ಆರ್.ಫಂಡ್ ಬಗ್ಗೆ ನಾನು ಅವತ್ತು ಮಾತನಾಡಿದ್ದು. ನನಗೂ ವಿವೇಕಾನಂದ ವರ್ಗಾವಣೆಗೂ ಸಂಬಂಧವಿಲ್ಲ. ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ " ಎಂದರು.
ಒಬ್ಬ ಸಿಎಂ ಮೇಲೆ ಆರೋಪ ಮಾಡಬೇಕಾದರೆ ಸಾಕ್ಷ್ಯ ಇಟ್ಟುಕೊಳ್ಳಬೇಕು. ನನ್ನ ತಂದೆ ಆಗಲಿ, ನಾನಾಗಲಿ ಯಾವುದೇ ದಂಧೆ ನಡೆಸುತ್ತಿಲ್ಲ. ವಿವೇಕಾನಂದ ಯಾರು ಎಂದು ನನಗೆ ಗೊತ್ತಿಲ್ಲ. ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ವಿಪಕ್ಷಗಳು ಹತಾಶರಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದು , ಅವರು ಸಿಎಂ ಆಗಿಯೂ ಕೆಲಸ ಮಾಡಿದ್ದಾರೆ. ಹೆಚ್‌ಡಿಕೆ ಅಧಿಕಾರದಲ್ಲಿದ್ದಾಗ ದಂಧೆಯನ್ನೇ ಮಾಡುತ್ತಿದ್ರಾ? ಭ್ರಷ್ಟಾಚಾರ, ದಂಧೆ ಆಗ್ತಿದೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ನಾನು ಆ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವೇ ಇಲ್ಲ. ನಾನು ಹತ್ತಾರು ವಿಚಾರಗಳ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ. ಹಲವು ಕೆಲಸ ಮಾಡಿಕೊಡುವಂತೆ ಪಟ್ಟಿ ಕೊಡುತ್ತೇನೆ. ನಾನು ದುಡ್ಡಿನ ಬಗ್ಗೆ ಮಾತನಾಡಿದ್ದರೆ ಸ್ಪಷ್ಟನೆ ಕೊಡಬಹುದಿತ್ತು ಎಂದು ಹೇಳಿದರು.