ಸುಳ್ಳು ಎಫ್‍ಐಆರ್ ದಾಖಲಿಸಿದ ಆರೋಪ: ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ

Update: 2023-11-25 14:02 GMT

Photo:ಪೊಲೀಸ್ ಆಯುಕ್ತ ಬಿ.ದಯಾನಂದ್

ಬೆಂಗಳೂರು: ಇನ್ಸ್‌ ಪೆಕ್ಟರ್‌ರೊಬ್ಬರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಯದಿದ್ದರೂ ನಡೆದಿದೆ ಎಂದು ಬಿಂಬಿಸಿ, ಸುಳ್ಳು ಎಫ್‍ಐಆರ್ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ್ದ ದೂರಿನ ಅನ್ವಯ ಇನ್ಸ್‌ ಪೆಕ್ಟರ್‌ ಜಿ.ಕೆ. ಶಂಕರ್ ನಾಯಕ್ ಹಾಗೂ ಇತರರ ವಿರುದ್ಧ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಸುಳ್ಳು ಪ್ರಕರಣ ಸೃಷ್ಟಿಸಿ ಹಣ ದೋಚಲು ಸಂಚು ರೂಪಿಸಿದ್ದ ಹಾಗೂ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸಿಪಿ ಮಟ್ಟದ ಅಧಿಕಾರಿ ನಡೆಸಬೇಕಿರುವುದು ಹಾಗೂ ಎಸಿಪಿಯೇ ದೂರುದಾರ ಆಗಿರುವುದರಿಂದ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಬಿ.ದಯಾನಂದ್ ಹೇಳಿದ್ದಾರೆ.

2022ರ ಸೆಪ್ಟೆಂಬರ್ ನಲ್ಲಿ ಉದ್ಯಮಿ ಹರೀಶ್ ಎಂಬುವರಿಗೆ ಸೇರಿದ್ದ 75 ಲಕ್ಷ ರೂ. ಹಣವನ್ನುಅವರ ಕಾರು ಚಾಲಕ ಸಂತೋಷ್ ಕದ್ದೊಯ್ದಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಹೊಸಕೋಟೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದರೂ ಅದನ್ನು ಬ್ಯಾಟರಾಯನಪುರ ವ್ಯಾಪ್ತಿಯಲ್ಲಿಯೇ ಕಳ್ಳತನ ನಡೆದಿರುವುದಾಗಿ ಇನ್‍ಸ್ಪೆಕ್ಟರ್ ಶಂಕರ್ ನಾಯಕ್ ಸುಳ್ಳು ಪ್ರಕರಣ ಸೃಷ್ಟಿಸಿದ್ದಾರೆ. ಅಲ್ಲದೇ, ತಾನೇ ಸಿದ್ಧಪಡಿಸಿದ್ದ ದೂರಿಗೆ ಮೂರನೇ ವ್ಯಕ್ತಿಯಿಂದ ನಕಲಿ ಸಹಿ ಪಡೆದು ಎಫ್‍ಐಆರ್ ದಾಖಲಿಸಿಕೊಂಡು, ಆರೋಪಿ ಪತ್ತೆ ಮಾಡಿ 72 ಲಕ್ಷ ರೂ. ಜಪ್ತಿ ಮಾಡಿದ್ದರು ಎಂದು ಎಸಿಪಿ ಭರತ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣದ ಬಗ್ಗೆ ಅನುಮಾನಗೊಂಡಿದ್ದ ಅಂದಿನ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಅದರನ್ವಯ ಪ್ರಕರಣದ ಕಡತಗಳನ್ನು ವಶಕ್ಕೆ ಪಡೆದಿದ್ದ ಎಸಿಪಿ ನೇತೃತ್ವದ ಅಧಿಕಾರಿಗಳ ತಂಡ, 72 ಲಕ್ಷ ರೂ. ಹಣವನ್ನು ಸರಕಾರಿ ಖಜಾನೆಯಲ್ಲಿ ಇರಿಸುವಂತೆ ಶಂಕರ್ ನಾಯಕ್‍ಗೆ ಸೂಚಿಸಿತ್ತು.

ಆದರೆ, ಹಲವು ಬಾರಿ ಜ್ಞಾಪನ ನೀಡಿದ್ದರೂ ಇನ್ಸ್‌ ಪೆಕ್ಟರ್‌ ಶಂಕರ್ ನಾಯಕ್ ಮಾತ್ರ ಹಣವನ್ನು ಸರಕಾರಿ ಖಜಾನೆಯಲ್ಲಿ ಇಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ಶಂಕರ್ ನಾಯಕ್ ವರ್ಗಾವಣೆಯಾಗಿ ಆ ಸ್ಥಾನಕ್ಕೆ ಮತ್ತೊಬ್ಬರು ಬಂದಿದ್ದು, ಅವರೂ ಹಲವು ಬಾರಿ ನೋಟಿಸ್ ನೀಡಿದ್ದರೂ ಇನ್ಸ್‌ ಪೆಕ್ಟರ್‌ ಹಣ ವಾಪಸ್ ನೀಡಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಎಲ್ಲ ಅಂಶಗಳನ್ನು ಆಧರಿಸಿ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೀಡಿದ್ದ ದೂರಿನನ್ವಯ, ಐಪಿಸಿ 409, ಐಪಿಸಿ 465, ಐಪಿಸಿ 201, ಐಪಿಸಿ 110ರಡಿಯಲ್ಲಿ ಮತ್ತು ಆರೋಪ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇನ್ಸ್‌ ಪೆಕ್ಟರ್‌ ಶಂಕರ್ ನಾಯಕ್ ಹಾಗೂ ಲೋಕನಾಥ್ ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News