ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಇಬ್ಬರು ಶಿಕ್ಷಕರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್
ಬೆಂಗಳೂರು : ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾತ್ರದಾರರು ಎಂದು ಹೇಳುತ್ತೇವೆ. ಅವರು ವಿದ್ಯಾರ್ಥಿಗಳನ್ನು ಖಂಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ಎಂಬುದಾಗಿ ಹೇಳಲಾಗದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಶಾಲೆಯೊಂದರ ಶಿಕ್ಷಕಿಯರನ್ನು ಆರೋಪ ಮುಕ್ತಗೊಳಿಸಿ ಆದೇಶಿಸಿದೆ.
ಬೆಂಗಳೂರು ನಗರದ ಲಕ್ಕಸಂದ್ರದ ಮೇರಿ ಇಮ್ಮಾಕ್ಯುಲೇಟ್ ಹೈಸ್ಕೂಲ್‌ನ ಶಾಲಾ ಪ್ರಾಂಶುಪಾಲರಾದ ಎ.ಸಿ.ಮರಿಯಾ ಲೈಲಾ ಮತ್ತು ಶಿಕ್ಷಕಿ ಫಿಲೋಮಿನಾ ಇಮ್ಯಾನ್ಯುಯಲ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜು ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಿದೆ
ಶಿಕ್ಷಣದ ಕುರಿತು ಗಮನ ಹರಿಸದಿರುವುದು, ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ಶಿಕ್ಷಕರು ಖಂಡಿಸುವುದು ಸಾಮಾನ್ಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣ ಸಂಬಂಧ ಅರ್ಜಿದಾರರು/ಆರೋಪಿಗಳ ಸ್ವಯಂಪ್ರೇರಿತ ಹೇಳಿಕೆ ಸೇರಿದಂತೆ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತಮ ಭವಿಷ್ಯಕ್ಕಾಗಿ ಶಾಲೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಉತ್ತಮ ಸಾಧನೆ ಮಾಡಿರಲಿಲ್ಲ. ಆದ ಕಾರಣ ಅರ್ಜಿದಾರ ಶಿಕ್ಷಕರು ಅವರಿಗಾಗಿ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಬೋಧನೆ ಮಾಡಿದ್ದಾರೆ . ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದಲ್ಲಿ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಎಂದು ಆಗಾಗ್ಗೆ ಹೇಳುತ್ತಿರುತ್ತೇವೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರ ಅಡಿಯಲ್ಲಿ ಆತ್ಮ ಹತ್ಯೆಗೆ ಪ್ರಚೋದನೆ ನೀಡಬೇಕಾದರೆ, ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಪ್ರಚೋಧನೆ ನೀಡಿರಬೇಕು. ಜತೆಗೆ, ಪ್ರಚೋದನೆ ಮತ್ತು ಸಾವಿಗೆ ಅತ್ಯಂತ ಹತ್ತಿರ ದಿನಗಳಲ್ಲಾಗಿರಬೇಕು. ಆದರೆ, ಡೆತ್ ನೋಟ್ ಮತ್ತು ಪ್ರಾಸಿಕ್ಯೂಷನ್ ವಾದವನ್ನು ಆಲಿಸಿದ ನ್ಯಾಯಪೀಠ, ವಿದ್ಯಾರ್ಥಿಗಳಿಗೆ ಅರ್ಜಿದಾರ ಆರೋಪಿಗಳು ಕಿರುಕುಳ ನೀಡಿರುವ ಅಂಶವನ್ನು ಸಾಬೀತು ಪಡಿಸಲು ವಿಫಲವಾಗಿವೆ. ಜತೆಗೆ, ಅರ್ಜಿದಾರರು ಆತ್ಮಹತ್ಯೆಗೆ ಯಾವ ರೀತಿಯಲ್ಲಿ ಜವಾಬ್ದಾರರು ಎಂಬುದನ್ನು ತಿಳಿಯುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಆತ್ಮಹತ್ಯೆ ಪ್ರಚೋಧನೆ ಮಾಡಿದ ಆರೋಪ ಸಾಬೀತಾಗುವುದಿಲ್ಲ. ಆರೋಪ ಸಾಬೀತು ಪಡಿಸಲು ದೃಢವಾದ ಪುರಾವೆಗಳಿಲ್ಲ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರಾಗಿರುವ ಇಬ್ಬರೂ ಶಿಕ್ಷಕರು ಮೃತ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇದರಿಂದ ಅವರು ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಮುಂದಾಗುವಂತಾಗಿದೆ. ಇದೇ ಕಾರಣದಿಂದ ಇಬ್ಬರೂ ಶಿಕ್ಷಕರ ವಿರುದ್ಧ ಡೆತ್ ನೋಟ್ ಬರೆದಿಟ್ಟು ಸ್ಯಾಂಕಿ ಟ್ಯಾಂಕ್ ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ ಏನು ?
2014ರ ಮಾರ್ಚ್ 18ರಂದು ಇಬ್ಬರು ವಿದ್ಯಾರ್ಥಿನಿಯರು ನಗರದ ಸ್ಯಾಂಕಿ ಕೆರೆಯಲ್ಲಿ ಮುಳಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಬ್ಬ ವಿದ್ಯಾರ್ಥಿನಿ ಬ್ಯಾಗ್‌ನಲ್ಲಿ ಲಭ್ಯವಾಗಿದ್ದ ಡೆತ್ ನೋಟ್‌ನಲ್ಲಿ ಇಬ್ಬರು ಅರ್ಜಿದಾರ ಶಿಕ್ಷರ ಕಿರುಕುಳದ ಕುರಿತು ವಿವರಿಸಿ, ಅವರ ಕಿರುಕುಳದಿಂದ ಆತ್ಮಹತ್ಯೆಗೆ ಮುಂದಾಗಿರುವುದಾಗಿ ಉಲ್ಲೇಖಿಸಲಾಗಿತ್ತು. ಈ ಸಂಬಂಧ ಮೃತರ ಪೋಷಕರು ಸದಾಶಿವನಗರ ಪೊಲೀಸ್‌ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ನಡುವೆ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕು ಎಂದು ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೊರ್ಟ್ ಮೆಟ್ಟಿಲೇರಿದ್ದರು.