ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಯ ಬಂಧನ
ಬೆಂಗಳೂರು: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾದ ಎಂಟು ವರ್ಷಗಳ ಬಳಿಕ ಎನ್ಐಎ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿರುವುದು ವರದಿಯಾಗಿದೆ.
2016 ಅಕ್ಟೋಬರ್ 16ರಂದು ಗಣವೇಷದಲ್ಲಿದ್ದ ರುದ್ರೇಶ್ನನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ 8 ವರ್ಷಗಳ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮುಹಮ್ಮದ್ ಗೌಸ್ ನಯಾಝಿ ಎಂಬಾತನನ್ನು ಬಂಧಿಸಿರುವುದಾಗಿ ಎನ್ಐಎ ಪ್ರಕಟಣೆ ಹೊರಡಿಸಿದೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತನಾಗಿದ್ದ ಮೊಹಮ್ಮದ್ ಗೌಸ್ ತಲಮರೆಸಿಕೊಂಡಿದ್ದ. ಕಳೆದ ಶುಕ್ರವಾರ ತಾಂಜೇನಿಯಾದಿಂದ ಮುಂಬೈಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ರುದ್ರೇಶ್ 2016 ಅಕ್ಟೋಬರ್ 16ರಂದು ಕಾಮರಾಜ್ ರಸ್ತೆಯ ಶ್ರೀನಿವಾಸ್ ಮೆಡಿಕಲ್ ಬಳಿ ನಿಂತಿರುವಾಗ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಕರ್ಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಸೀಂ ಶರೀಫ್, ವಸೀಂ ಅಹಮದ್, ಇರ್ಫಾನ್ ಪಾಷಾ, ಮೊಹಮ್ಮದ್ ಮುಬೀಬುಲ್ಲಾ ಎಂಬವರನ್ನು ಬಂಧಿಸಲಾಗಿತ್ತು. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಹಮ್ಮದ್ ಗೌಸ್ ಮಾಹಿತಿಗಾಗಿ ಬಹುಮಾನ ಘೋಷಿಸಿದ್ದ ಎನ್ಐಎ:
ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿಯಾದ ಮೊಹಮ್ಮದ್ ಗೌಸ್ ನಯಾಝಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಆತನ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನವನ್ನೂ ನೀಡುವುದಾಗಿ ಕಳೆದ ವರ್ಷ ಘೋಷಿಸಿತ್ತು.
2021ರಲ್ಲಿ ಆರೋಪಿಗಳ ಜಾಮೀನು ತಿರಸ್ಕರಿಸಿದ್ದ ವಿಶೇಷ ಕೋರ್ಟ್:
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಒಂದನೇ ಆರೋಪಿ ಇರ್ಫಾನ್ ಪಾಷಾ ಹಾಗೂ ನಾಲ್ಕನೇ ಆರೋಪಿ ಮೊಹಮ್ಮದ್ ಮುಜೀಬ್ ಉಲ್ಲಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಯಾರೋ ಅಪರಿಚಿತ ದುಷ್ಕರ್ಮಿಗಳು ರುದ್ರೇಶ್ ಹತ್ಯೆ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ನಮ್ಮನ್ನು ಬಂಧಿಸಿದ್ದಾರೆ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.
ಎನ್ಐಎ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಾಲಯ ವಾದ ಪ್ರತಿವಾದ ಆಲಿಸಿ ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.