ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಜಮೀನು ಜಂಟಿ ಸರ್ವೆಗೆ ಕ್ರಮ: ಸಚಿವ ಈಶ್ವರ್ ಖಂಡ್ರೆ

Update: 2023-12-14 09:06 GMT

ಬೆಳಗಾವಿ: ಅರಣ್ಯ ಅಥವಾ ರಕ್ಷಿತಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹಾಗೂ 100 ಮೀಟರ್ ವ್ಯಾಪ್ತಿಯಲ್ಲಿನ ಜಮೀನು ಗಡಿ ಗುರುತಿಸುವ ಸಂಬಂಧ ಅರಣ್ಯ ಹಾಗೂ ಕಂದಾಯ ಇಲಾಖೆ ಕಾಲಮಿತಿಯಲ್ಲಿ ಜಂಟಿ ಸರ್ವೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜಾ, ಕಾಂಗ್ರೆಸ್ ಸದಸ್ಯ ಅನಿಲ್ ಚಿಕ್ಕಮಾದು ಕೇಳಿದ ಪ್ರಶ್ನೆಗೆ ಪ್ರತ್ಯೇಕವಾಗಿ ಉತ್ತರ ನೀಡಿದ ಸಚಿವರು, ‘ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯ ಗಡಿ ಗುರುತಿಸುವುದು ಅಗತ್ಯಗತ್ಯ. ಪ್ರತಿ ಹತ್ತು ವರ್ಷಕ್ಕೆ ಒಮ್ಮೆ ಗಡಿ ಗುರುತಿಸುವ ಕಾರ್ಯ ನಡೆಯಬೇಕು ಎಂಬ ನಿಯಮ ಇದೆ’ ಎಂದು ತಿಳಿಸಿದರು.

ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಆದಿವಾಸಿ ಬುಡಕಟ್ಟು ಜನಾಂಗದವರು, ರೈತರು ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿರುವುದು, ಮನೆ ನಿರ್ಮಿಸಿಕೊಂಡಿದ್ದಾರೆ. ಭೂಮಿಯನ್ನು ಅತಿಕ್ರಮಣ ಮಾಡಬಾರದು ಎಂಬ ಅರಿವು ಮೂಡಿಸಲಾಗುತ್ತಿದೆ. ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸುವ ಮೊದಲು ಸಮೀಕ್ಷೆ ನಡೆಸಬೇಕಾಗಿದೆ. ರೈತರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಲಾಗುವುದು. ರೈತರು, ಬುಡಕಟ್ಟು ಜನಾಂಗದವರ ಭೂಮಿ ಹೊರತುಪಡಿಸಿ ಇನ್ನುಳಿದ ಜಾಗವನ್ನು ಅರಣ್ಯ ಮೀಸಲು ಪ್ರದೇಶ ಎಂದು ಗುರುತಿಸಲಾಗುವುದು ಎಂದು ಉತ್ತರ ನೀಡಿದರು.

ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ

ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಬೆಂಬಲವಾಗಿ ಬಿಜೆಪಿ ಸದಸ್ಯರಾದ ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ, ಭಾಗೀರಥಿ ಮರುಳ್ಯ ಸೇರಿದಂತೆ ಇತರರು ದನಿಗೂಡಿಸಿ, ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಆನೆ, ಚಿರತೆ, ಹುಲಿ, ಕಾಡೆಮ್ಮೆ ಸೇರಿದಂತೆ ವನ್ಯಜೀವಿಗಳ ನಿಯಂತ್ರ್ರಣಕ್ಕಾಗಿ ಶಾಶ್ವತ ಪರಿಹಾರ ಕಲ್ಪಿಸಲು ರೈಲ್ವೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಉತ್ತರ ನೀಡಿದ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ, ‘ರಾಜ್ಯದಲ್ಲಿ ಆನೆ-ಮಾನವ ಸಂಘರ್ಷ ತಡೆಯುವ ಸಂಬಂಧ ಈ ಮೊದಲು ಕಂದಕ, ಸೋಲಾರ್ ತಂತಿ ಬೇಲಿಗಳನ್ನು ನಿರ್ಮಿಸಲಾಗಿತ್ತು. ಆದರೆ ಇದು ಪ್ರಯೋಜನವಾಗದ ಕಾರಣ ಇದೀಗ ಶಾಶ್ವತ ಪರಿಹಾರಕ್ಕಾಗಿ ರಾಜ್ಯದಲ್ಲಿ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 6,395 ಆನೆಗಳು ಇವೆ. ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ಆಯವ್ಯಯದಲ್ಲಿ 100 ಕೋಟಿ ರೂ.ಮೀಸಲಿಡಲಾಗಿದೆ. ಆನೆಗಳ ಹಾವಳಿ ತಡೆಯುವ ಸಂಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 120 ಕಿ.ಮೀ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣಕ್ಕೆ 200 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News