ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಮಧುಬಂಗಾರಪ್ಪ

Update: 2023-08-05 14:41 GMT

ಶಿವಮೊಗ್ಗ(ಆ. 5): ಜಿಲ್ಲೆಯಲ್ಲಿನ ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಶರಾವತಿ ಸಂತ್ರಸ್ಥರ ಪುನರ್ವಸತಿ ಮತ್ತು ಸಮಸ್ಯೆಗೆ ಶಾಶ್ವತ ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬಹು ದಿನಗಳ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಉತ್ಸುಕರಾಗಿದ್ದಾರೆ ಎಂದರು.

ಈ ಸಂಬಂಧ ಕಳೆದ ವರ್ಷ ಶರಾವತಿ ಸಂತ್ರಸ್ಥರ ಪ್ರತಿನಿಧಿಗಳು, ಪರಿಸರಾಸಕ್ತರು, ತಜ್ಞರು, ಹಾಗೂ ಬುದ್ದಿಜೀವಿಗಳನ್ನೊಳಗೊಂಡ ಹಲವು ಸದಸ್ಯರ ಸಮಿತಿಯನ್ನು ರಚಿಸಿ, ಹೋರಾಟ ರೂಪಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಂದಿನ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.

ಹಲವು ದಶಕಗಳ ಹಿಂದೆಯೆ ಸರ್ಕಾರದಿಂದ ಹಕ್ಕುಪತ್ರಗಳನ್ನು ಪಡೆದುಕೊಂಡಿದ್ದು ಸಾಗುವಳಿ ಮಾಡುತ್ತಿರುವವರನ್ನು ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿಕೊಂಡಿರುವವರನ್ನು ಒಕ್ಕಲೆಬ್ಬಿಸುವ ಮೊದಲು ಅವರು ಹೊಂದಿರುವ ದಾಖಲಾತಿಗಳು ಪರಿಶೀಲಿಸಬೇಕು. ಅಲ್ಲದೆ ಕಂದಾಯ ಇಲಾಖೆಯ ದಾಖಲೆಗಳಲ್ಲಿಯೂ ಬದಲಾವಣೆ ಮಾಡಿಕೊಡುವಂತೆ ಅವರುಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಕ್ರಮ ವಹಿಸುವ ಮುನ್ನ ಶರಾವತಿ ಸಂತ್ರಸ್ತರ ಸಮಸ್ಯೆ ಹೋರಾಟ ಸಮಿತಿಯ ಸದಸ್ಯರ ಸಲಹೆಯನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಸೊರಬ ತಾಲೂಕಿನ ಶಿಡ್ಡಿಹಳ್ಳಿ ೧೪೦ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪುನರ್ ಪರಿಶೀಲಿಸಿ ಮೊಕದ್ದಮೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಿ ಇ ಒ, ಶರಾವತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News