ಮುಂದಿನ ಬಜೆಟ್‍ನಲ್ಲಿ ಹಿರಿಯ ನಾಗರಿಕರ ಮಾಶಾಸನ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

Update: 2023-10-01 17:41 GMT

ಬೆಂಗಳೂರು ಅ.1: ʼʼವೃಧ್ಧರಿಗೆ 2 ಸಾವಿರ ರೂಪಾಯಿ ಮಾಶಾಸನ ನೀಡುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ರವಿವಾರ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೆ ಇಹಲೋಕ ತ್ಯಜಿಸಬೇಕು ಎಂದರು.

ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೆ ಹಿರಿಯರಿಗೆ ನಾವು ನೀಡುವ ಗೌರವ. ನಾವು, ನೀವೆಲ್ಲ ಎಷ್ಟು ವರ್ಷ ಬದುಕುತ್ತೀವಿ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲ್, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕ ಎಚ್.ಎಸ್.ಗಿರಿರಾಜ್ ಎಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ಸೂಚಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ನಾಗರಿಕರಿಗೆ ಸರಕಾರದ ವತಿಯಿಂದ 1200 ರೂ.ಮಾಸಾಶನ ಬರುತ್ತಿದ್ದು, ಈ ಮೊತ್ತವನ್ನು 2 ಸಾವಿರ ರೂ.ಗೆ ಏರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಸುಮಾರು 48 ಲಕ್ಷ ವೃದ್ಧರಿಗೆ ವೃದಾಪ್ಯವೇತನ ನೀಡುತ್ತಿದ್ದು, ಸುಮಾರು 58 ಲಕ್ಷ ಮಂದಿ ಹಿರಿಯ ನಾಗರಿಕರಿದ್ದಾರೆ. ವೃದ್ಧಾಪ್ಯ ವೇತನವನ್ನು 2 ಸಾವಿರ ರೂಪಾಯಿಗೆ ಏರಿಸುವುದರಿಂದ ಅವರಿಗೆ ಸಾಕಷ್ಟು ಅನುಕೂಲ ಆಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಹಿರಿಯ ನಾಗರಿಕರ ಸ್ಮರಣೆ ಕೇವಲ ಈ ಒಂದು ದಿನಕ್ಕೆ ಸೀಮಿತವಾಗಬಾರದು. ಹಿರಿಯ ನಾಗರಿಕರ ಅನುಭವ ನಮಗೆಲ್ಲಾ ಸಂಪನ್ಮೂಲ ಆಗಬೇಕು. ಹಿರಿಯರ ಅನುಭವದ ಮಾತುಗಳು ನಮಗೆ ಮುಖ್ಯ. ಹಿರಿಯ ನಾಗರಿಕರ ಸಬಲಿಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುತ್ತಾ ಬಂದಿವೆ ಎಂದು ಅವರು ಹೇಳಿದರು.

ನುಡಿದಂತೆ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ, ಹಿರಿಯರಿಗೆ ಇನ್ನು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ನೂನ್ಯತೆಗಳಿಗೆ ಶೀಘ್ರವೇ ಪರಿಹಾರ: ರಾಜ್ಯದಲ್ಲಿರುವ ಕೆಲ ವೃದ್ಧಾಶ್ರಮಗಳಲ್ಲಿ ಹಲವು ನೂನ್ಯತೆಗಳನ್ನು ಗಮನಿಸಿದ್ದೇನೆ. ಈ ಕೇಂದ್ರಗಳಲ್ಲಿ ಹಿರಿಯರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಶೀಘ್ರವೆ ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಎನ್.ಸಿದ್ದೇಶ್ವರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News