ಚನ್ನಪಟ್ಟಣ-ರಾಮನಗರ ನಡುವೆ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕ್ರಮ : ಕುಮಾರಸ್ವಾಮಿ ಭರವಸೆ
ಚನ್ನಪಟ್ಟಣ : ʼಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಅಭಿವೃದ್ಧಿ ಮಾಡಲಾಗುವುದು. ಮತ್ತು ಇವೆರಡೂ ಪಟ್ಟಣಗಳ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದುʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ವಿರೂಪಸಂದ್ರ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದರು ಅವರು, ಚನ್ನಪಟ್ಟಣ ಹಾಗೂ ರಾಮನಗರಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು. ಈವರೆಗೂ ನಾನು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ತಾಲ್ಲೂಕಿನ ಜನರ ಔದಾರ್ಯ ಹಾಗೂ ಮಂಡ್ಯ ಜನರ ಆಶೀರ್ವಾದ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ನಂಬಿಕೆಯಿಂದ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಸಿಕ್ಕಿರುವ ಈ ಅವಕಾಶ ಸದ್ಭಳಕೆ ಮಾಡಿಕೊಂಡು ಜಿಲ್ಲೆಗೆ ನನಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆಗೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತೇನೆ ಎಂದರು.
ʼಈ ಭಾಗದ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶ ದೊರಕಿಸುವ ಕೆಲಸ ಮಾಡುತ್ತೇವೆ. ಅಲ್ಲದೆ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಆರ್ಥಿಕತೆಗೆ ಶಕ್ತಿ ಬಂದು ಈ ಭಾಗದಲ್ಲಿ ಜನಜೀವನ ಸುಧಾರಿಸುತ್ತದೆʼ ಎಂದು ಹೇಳಿದರು.
2018ರಲ್ಲಿ ಕಾರ್ಯಕರ್ತರು ಒತ್ತಡ ಹಾಕಿ ನನ್ನನ್ನು ಚನ್ನಪಟ್ಟಣಕ್ಕೆ ಕರೆತಂದರು. ಬಳಿಕ ಎರಡು ಬಾರಿಯೂ ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಇಗ್ಗಲೂರು ಬಳಿ ಜಲಾಶಯ ಕಟ್ಟಿಸಿದರು. ಹಲವು ಪಕ್ಷಗಳಿಗೆ ಹೋಗಿ ಈಗ ಕಾಂಗ್ರೆಸ್ ಸೇರಿರುವ ಕಾಂಗ್ರೆಸ್ ಅಭ್ಯರ್ಥಿ ತಾಲೂಕಿಗೆ ನೀರಾವರಿ ಕೊಟ್ಟಿದ್ದು ನಾನೇ ಎನ್ನುತ್ತಿದ್ದಾರೆ. ದೇವೇಗೌಡರು ಡ್ಯಾಂ ಕಟ್ಟಲಿಲ್ಲ ಅಂದರೆ ಇವರು ಕೆರೆಗಳಿಗೆ ನೀರು ಎಲ್ಲಿಂದ ತುಂಬಿಸುತ್ತಿದ್ದರು ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿದೆ. ಮಾವಿನ ಸಂರಕ್ಷಣೆಗೆ ನೂತನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಸಾಕಷ್ಟು ರಸ್ತೆಗಳು, ಶಾಲೆಗಳನ್ನು ಅನುದಾನ ತಂದು ನಿರ್ಮಾಣ ಮಾಡಿದ್ದೇವೆ. ಈಗ ಅನಿವಾರ್ಯವಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ನಿಮ್ಮ ಮನೆ ಮಗ ಅಂತ ತಿಳಿದು ಅವರಿಗೆ ಆಶೀರ್ವಾದ ಮಾಡಿ. ನಿಮ್ಮ ಕುಟುಂಬದ ಮಗ ಎಂದು ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು.