ಬರ ಪರಿಹಾರದ ಹಣ ರೈತರ ಖಾತೆಗೆ ವರ್ಗಾಯಿಸಲು ಕ್ರಮ : ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು : ಮೊದಲ ಹಂತದಲ್ಲಿ ರಾಜ್ಯ ಸರಕಾರವೇ ರೈತರಿಗೆ ಬರ ಪರಿಹಾರ ಪಾವತಿಸಿದ್ದು, ಇದೀಗ ಎನ್‍ಡಿಆರ್ ಎಫ್ ಪರಿಹಾರ ಹಣ ಲಭ್ಯವಾಗಿದೆ. ಈ ಹಣವನ್ನು ನಿಯಮದಂತೆ ಶೀಘ್ರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿದ ಅವರು, ರಾಜ್ಯ ಸರಕಾರವು ರಾಜ್ಯದ ರೈತರಿಗೆ ಎನ್‍ಡಿಆರ್ ಎಫ್‍ನಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಕೇಂದ್ರ ಸರಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ವಿಚಾರಣೆಯ ಬಳಿಕ ಎ.26ರಂದು 3,454.22 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಎನ್‍ಡಿಆರ್ ಎಫ್ ಅಡಿಯಲ್ಲಿ ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಕೇಂದ್ರದಿಂದ ಹಣ ಬಿಡುಗಡೆ ಅಗುತ್ತಿದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ. ಎ.27 ಮತ್ತು ಎ.28ರಂದು ಎರಡು ದಿನಗಳು ರಜಾದಿನಗಳು, ನಂತರ ಎ.29 ಮತ್ತು ಎ.30 ಎರಡು ದಿನಗಳಂದು ಬಾಕಿ ಉಳಿದ ಬೆಳೆ ಹಾನಿ ಪರಿಹಾರ ನೀಡಲು ಎಲ್ಲ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು. ಮೇ 1 ರಂದು ಪುನಃ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ರಜಾ ದಿನವಾಗಿರುತ್ತದೆ ಎಂದು ವಿವರಿಸಿದ್ದಾರೆ.
ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ ಎಸ್‍ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯನುಸಾರ ಎಲ್ಲ ಅರ್ಹ ರೈತರಿಗೆ ಪಾವತಿ ಮಾಡಲು ಎಸ್‍ಡಿಆರ್ ಎಫ್‍ನ ಆಯುಕ್ತರಿಗೆ 3,454.22 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲು ಮೇ 2ರಂದು ಆದೇಶ ಹೊರಡಿಸಲಾಗಿದೆ. ಅದರಂತೆ ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮುಖಾಂತರ ನೇರ ವರ್ಗಾವಣೆ ಮಾಡಲು ಕಳೆದ ವಾರಂತ್ಯವೇ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ ಕ್ರಮದ ನಂತರ ಆರ್ ಬಿಐನಿಂದ ರೈತರ ಖಾತೆಗೆ ಹಣ ವರ್ಗಾಯಿಸಲು 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಎಲ್ಲ ರೈತರ ಖಾತೆಗಳಿಗೆ ಮುಂದಿನ 2-3 ದಿನಗಳೊಳಗಾಗಿ ಬರಪರಿಹಾರ ಮೊತ್ತವು ಜಮೆಯಾಗಲಿದೆ. ಇಲ್ಲಿಯವರೆಗೆ ಒಟ್ಟು 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದೆ. ಇನ್ನೂ 2 ಲಕ್ಷ ರೈತರಿಗೆ ಬರಪರಿಹಾರ ಮೊತ್ತವನ್ನು ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ʼಸುಪ್ರಿಂ ಕೋರ್ಟ್ ವಿಚಾರಣೆಯ ಬಳಿಕ ರಾಜ್ಯಕ್ಕೆ ಕೇಂದ್ರ ಸರಕಾರವು 3,454.22 ಕೋಟಿ ರೂ.ಗಳನ್ನು ಬರ ಪರಿಹಾರವಾಗಿ ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿನ ಅನುದಾನವನ್ನು ಎನ್‍ಡಿಆರ್ ಎಫ್ ಅಡಿಯಲ್ಲಿ ಕೇಂದ್ರವು ರಾಜ್ಯಕ್ಕೆ ಬಿಡುಗಡೆ ಮಡಬೇಕು. ಹೀಗಾಗಿ ರಾಜ್ಯದ ಬಾಕಿ ಪರಿಹಾರ ಹಣ ಪಡೆಯಲು ಕೇಂದ್ರದ ಜೊತೆಗಿನ ಕಾನೂನು ಹೋರಾಟ ಮುಂದುವರಿಯಲಿದೆʼ
ಕೃಷ್ಣ ಬೈರೇಗೌಡ, ಕಂದಾಯ ಸಚಿವ