ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್, ಪವಿತ್ರಾಗೌಡ ಸಹಿತ 13 ಮಂದಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

Update: 2024-06-11 16:39 GMT

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಪವಿತ್ರಾಗೌಡ, ಎ2 ಆರೋಪಿ ನಟ ದರ್ಶನ್ ಸೇರಿ 13 ಜನರನ್ನು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಈ ಪ್ರಕರಣ ಸಂಬಂಧ ನಟ ದರ್ಶನ್, ಆತನ ಆಪ್ತ ಸ್ನೇಹಿತೆ ಪವಿತ್ರಾಗೌಡ, ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿದಂತೆ 13 ಜನರು ಬಂಧಿತ ಆರೋಪಿಗಳಾಗಿದ್ದು, ಇವರನ್ನು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಎಸಿಪಿ ಚಂದನ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳ ಪ್ರಾಥಮಿಕ ವಿಚಾರಣೆ ಕೈಗೊಂಡು ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇನ್ನು ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಧೀಶರಿಗೆ ಕೋರಿದಾಗ ಈ ಕುರಿತಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಜೂ.9ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮೋರಿಯ ಪಕ್ಕದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಶವವನ್ನು ಗಮನಿಸಿದ ಸ್ಥಳೀಯ ಅಪಾರ್ಟ್‍ಮೆಂಟ್‍ವೊಂದರ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಮೃತನ ವಿವರ ಹಾಗೂ ಆತ ಹತ್ಯೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದರು. ನಂತರ ತಾಂತ್ರಿಕ ಅಂಶಗಳ ಆಧಾರದಲ್ಲಿ ಮೃತನ ವಿವರ ಕಲೆಹಾಕಲಾಗಿತ್ತು.

ಮೃತ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ(33) ಎಂಬುದು ತಿಳಿದು ಬಂದಿತ್ತು. ಆತ ಮೆಡಿಕಲ್ ಶಾಪ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಈ ಪ್ರಕರಣದ ಪ್ರಾರಂಭಿಕ ತನಿಖೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದರು. ನಂತರ ತೀವ್ರ ವಿಚಾರಣೆ ಕೈಗೊಂಡಾಗ ಕೊಲೆಯಾದ ರೇಣುಕಾಸ್ವಾಮಿಯು ನಟ ದರ್ಶನ್ ಆಪ್ತೆ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ. ಈ ಕಾರಣಕ್ಕೆ ನಟ ದರ್ಶನ್ ಅವರ ಸೂಚನೆಯಂತೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‍ವೊಂದರಲ್ಲಿ ಕೊಲೆ ಮಾಡಲಾಗಿತ್ತು ಎಂಬುದಾಗಿ ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆಯಾದ ವ್ಯಕ್ತಿ ದರ್ಶನ್ ಅಭಿಮಾನಿ..!

ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗದ ನಟ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯನಾಗಿದ್ದ ಎನ್ನಲಾಗಿದೆ. ಈತ ಚಿತ್ರದುರ್ಗ ನಗರದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ. ಬೆಸ್ಕಾಂ ನಿವೃತ್ತ ನೌಕರರಾದ ಶಿವನಗೌಡ-ರತ್ನಪ್ರಭಾ ದಂಪತಿಯ ಮಗನಾದ ರೇಣುಕಾಸ್ವಾಮಿ ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿಯ ಪತ್ನಿ 3 ತಿಂಗಳ ಗರ್ಭಿಣಿ..!

ರೇಣುಕಾಸ್ವಾಮಿಗೆ 2023ರ ಜೂ.28ರಂದು ವಿವಾಹವಾಗಿತ್ತು. ಆತನ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. 3 ವರ್ಷದ ಹಿಂದೆ ರೇಣುಕಾಸ್ವಾಮಿ ಬಜರಂಗದಳ ಸುರಕ್ಷಾ ಪ್ರಮುಖ ಆಗಿ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ನಟ ದರ್ಶನ್ ಮನೆಗೆ ಬಿಗಿ ಭದ್ರತೆ:

ಪ್ರಕರಣ ಸಂಬಂಧ ನಟ ದರ್ಶನ್ ಅವರ ಬಂಧನವಾಗಿರುವ ಹಿನ್ನೆಲೆ ಈ ವಿಚಾರ ತಿಳಿದು ಅವರ ಅಭಿಮಾನಿಗಳು ಗಲಾಟೆ, ದಾಂಧಲೆ ನಡೆಸುವ ಸಾಧ್ಯತೆಯಿರುವುದರಿಂದ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸ ಬಳಿ ಬಿಗಿ ಭದ್ರತೆಗಾಗಿ ಕೆಎಸ್‍ಆರ್‍ಪಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಪಾತ್ರದ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಮೊದಲು ಬಂಧಿತರಾದ ವ್ಯಕ್ತಿಗಳು ದರ್ಶನ್‍ರ ಹೆಸರು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯಾವ ಕಾರಣಕ್ಕೆ ಈ ಪ್ರಕರಣದಲ್ಲಿ ದರ್ಶನ್ ಅವರ ಹೆಸರು ಬಂದಿದೆ ಗೊತ್ತಿಲ್ಲ. ಕೊಲೆ ಪ್ರಕರಣ ಆಗಿರುವುದರಿಂದ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಸದ್ಯಕ್ಕೆ ಯಾವುದನ್ನೂ ಹೇಳಲಾಗುವುದಿಲ್ಲ.’

-ಡಾ.ಜಿ.ಪರಮೇಶ್ವರ್, ಗೃಹಸಚಿವ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News