ಮನೆ ಊಟ, ಹಾಸಿಗೆಗಾಗಿ ನಟ ದರ್ಶನ್ ಅರ್ಜಿ: 10 ದಿನಗಳೊಳಗೆ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ

Update: 2024-07-31 08:52 GMT

ದರ್ಶನ್‌ (fb.com) | ಹೈಕೋರ್ಟ್‌ (PTI)

ಬೆಂಗಳೂರು: ಮನೆ ಊಟ, ಹಾಸಿಗೆ, ಚಮಚ, ತಟ್ಟೆಗಾಗಿ ನಟ ದರ್ಶನ್ ನೀಡಿರುವ ಮನವಿಯನ್ನು 10 ದಿನಗಳೊಳಗೆ ಜೈಲು ಅಧಿಕಾರಿಗಳು ತೀರ್ಮಾನ ಕೈಗೊಂಡು ಕೋರ್ಟ್ ಗೆ ತಿಳಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನ ಆಗಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಿದೆ.

ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ, ಜೈಲು ಕೈಪಿಡಿಗೆ ಕಾನೂನಿನ ಬೆಂಬಲವಿಲ್ಲ.ಕೈಪಿಡಿಯಲ್ಲಿರುವುದು ಕೇವಲ ಆಡಳಿತಾತ್ಮಕ ನಿಯಮಗಳಷ್ಟೇ.‌ ಜೈಲು ಅಧಿನಿಯಮ ಸೆ. 30 ಅಡಿ ಮನೆ ಊಟಕ್ಕೆ ಅವಕಾಶವಿದೆ. ವಿಚಾರಣಾಧೀನ ಕೈದಿಗಳು ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಆದರೆ ಜೈಲು ಕೈಪಿಡಿ ಆಧರಿಸಿ ಮ್ಯಾಜಿಸ್ಟ್ರೇಟ್ ಅನುಮತಿ ನಿರಾಕರಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಯೂ ಸಲಹೆ ನೀಡಿದ್ದಾರೆ. ಪೌಷ್ಟಿಕಾಹಾರ ನೀಡಬೇಕೆಂದು ಸಲಹೆ ನೀಡಿದ್ದಾರೆ. ದರ್ಶನ್ ಗೆ ಬೆನ್ನು ನೋವಿದೆ, ವೈರಲ್ ಫಿವರ್ ಇದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ದರ್ಶನ್ ಗೂ ಇತರೆ ವಿಚಾರಣಾಧೀನ ಕೈದಿಗಳಿಗೂ ವ್ಯತ್ಯಾಸವಿಲ್ಲ. ಎಲ್ಲ ಕೈದಿಗಳಿಗೂ ಪೌಷ್ಟಿಕಾಹಾರ ಅವಶ್ಯಕತೆ ಇದೆ. ನಟ ದರ್ಶನ್ ಮಾತ್ರವಲ್ಲ ಎಲ್ಲ ವಿಚಾರಣಾಧೀನ ಕೈದಿಗೂ ಅಗತ್ಯವಿದೆ. ಅನಾರೋಗ್ಯ ತುಂಬಾ ಬಿಗಡಾಯಿಸಿದ್ದರೆ ಅದನ್ನು ಜೈಲು ವೈದ್ಯರು ಪರಿಗಣಿಸುತ್ತಾರೆ. ಸಾವಿರಾರು ವಿಚಾರಣಾಧೀನ ಕೈದಿಗಳಿಗೆ ಇನ್ನೂ ಉತ್ತಮ ಪೌಷ್ಟಿಕಾಹಾರದ ಅಗತ್ಯವಿರಬಹುದು. ವೈದ್ಯರು ಏನು ಸೂಚಿಸುತ್ತಾರೋ ಅದನ್ನು ಜೈಲಿನಲ್ಲಿ ನೀಡುತ್ತಾರೆ. ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಆಹಾರ ಕೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಜೈಲು ಕೈಪಿಡಿ ಪ್ರಕಾರವೇ ಆಹಾರ ನೀಡಲಾಗುತ್ತಿದೆ ಎಂದು ಸರ್ಕಾರದ ಪರ ಮುಖ್ಯ ಅಭಿಯೋಜಕ ಬೆಳ್ಳಿಯಪ್ಪ ವಾದ ಮಂಡಿಸಿದರು.

 ದರ್ಶನ್ ಪರ ವಕೀಲರಿಗೆ ನ್ಯಾ.ಎಂ ನಾಗಪ್ರಸನ್ನ ಪ್ರತಿಕ್ರಿಯಿಸಿ, ರಾಗಿ ಮುದ್ದೆ ಗೋಡೆಗೆ ಹೊಡೆದರೆ ಹಿಂದಿರುಗುತ್ತದೆ ಎಂದು ಕೋರ್ಟ್ ಗೆ ಕೈದಿಯೊಬ್ಬ ಅರ್ಜಿ ಸಲ್ಲಿಸಿದ್ದ.  ನೀವು ಅಂತಹ ಆಹಾರ ನೀಡುತ್ತಿದ್ದೀರಾ ? ಎಂದು  ಪ್ರಶ್ನಿಸಿದರು.

ಜೈಲು ಅಧಿನಿಯಮದಲ್ಲಿ ಅನುಸರಿಸಬೇಕಾದ ನಿಯಮಗಳಿಲ್ಲ. ಹೀಗಾಗಿಯೇ ಜೈಲು ಕೈಪಿಡಿಯಲ್ಲಿ ನಿಯಮ ರಚಿಸಲಾಗಿದೆ. ಉದ್ಭವಿಸಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಎಲ್ಲ ಕೈದಿಗಳ ಬಗ್ಗೆಯೂ ಅದೇ ಮಾನವೀಯತೆ ಇರಬೇಕು. ಸೆಲೆಬ್ರಿಟಿ ಎಂದು ಬೇರೆ ನಿಯಮಗಳಿರುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ತಿಳಿಸಿದರು‌.

ಜೈಲು ಅಧಿಕಾರಿಗಳಿಗೆ ದರ್ಶನ್ ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಲು ಒಂದು ವಾರ ಕಾಲಾವಕಾಶ ಕೊಡಿ. ಮನವಿಯನ್ನು ಮಾನವೀಯತೆಯಿಂದ ಅಧಿಕಾರಿಗಳು ಪರಿಗಣಿಸಲಿ ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದರು.

ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್, 10 ದಿನಗಳೊಳಗೆ ಜೈಲು ಅಧಿಕಾರಿಗಳು ತೀರ್ಮಾನ ಕೈಗೊಂಡು ಕೋರ್ಟ್ ಗೆ ತಿಳಿಸಬೇಕು ಎಂದು ಆಗಸ್ಟ್ 20 ಕ್ಕೆ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News