ಬೆಂಗಳೂರು | ಏರೋನಿಕ್ಸ್ ಕಂಪೆನಿ ಸಿಇಒ, ಎಂಡಿ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2023-07-12 12:18 GMT
ಬಂಧಿತ ಆರೋಪಿಗಳು

ಬೆಂಗಳೂರು, ಜು.12: ಖಾಸಗಿ ಕಂಪೆನಿಗೆ ನುಗ್ಗಿ ಎಂಡಿ ಹಾಗೂ ಸಿಇಒ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಫಿಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಎಂಬವರನ್ನು ಕುಣಿಗಲ್ ಸಮೀಪ ಬಂಧಿಸಲಾಗಿದೆ ಎಮದು ಪೊಲೀಸರು ಹೇಳಿದ್ದಾರೆ.

ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮಾರಕಾಸ್ತ್ರಗಳನ್ನು ಹಿಡಿದು ಕಂಪೆನಿ ಕಚೇರಿಗೆ ನುಗ್ಗಿದ್ದ ಫಿಲಿಕ್ಸ್ ಹಾಗೂ ಇತರರು ಖಾಸಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಹ್ಮಣ್ಯಂ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನು ಕುಮಾರ್ ಅವರನ್ನು ಹತ್ಯೆ ಮಾಡಿದ್ದರು. ಈ ಸಂಬಂಧ ದಾಖಲಾದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ, ವಿನು ಕುಮಾರ್ ಹಾಗೂ ಆರೋಪಿ ಫಿಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಜೀ ನೆಟ್ ಎನ್ನುವ ಕಂಪೆನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆರು ತಿಂಗಳ ಹಿಂದೆ ಫಣೀಂದ್ರ ಸುಬ್ರಹ್ಮಣ್ಯಂ ಹಾಗೂ ವಿನು ಕುಮಾರ್ ಕಂಪೆನಿ ತೊರೆದಿದ್ದರು. 2022ರ ನವೆಂಬರ್‍ನಲ್ಲಿ ಅಮೃತಹಳ್ಳಿಯ ಪಂಪಾ ಲೇಔಟ್‍ನಲ್ಲಿ ತಮ್ಮದೇ ಇಂಟರ್ನೆಟ್ ಬ್ರಾಡ್ ಕಾಸ್ಟಿಂಗ್ ಎಂಬ ಹೊಸ ಕಂಪೆನಿ ಶುರು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದಿನ ದ್ವೇಷದ ಕಾರಣ ಫಿಲಿಕ್ಸ್, ಫಣೀಂದ್ರರನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಇನ್ನಿಬ್ಬರು ವಿನಯ್ ರೆಡ್ಡಿ ಹಾಗೂ ಶಿವುಗೆ ಫಣೀಂದ್ರನ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ, ಫಿಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಅದು ಅಲ್ಲದೆ, ಆರೋಪಿಗಳು ಫಣೀಂದ್ರನನ್ನು ಕೊಲ್ಲಲು ಬಂದಾಗ ವಿನು ಕುಮಾರ್ ನನ್ನು ಹತ್ಯೆ ಮಾಡುವ ಉದ್ದೇಶ ಅವರಿಗಿರಲಿಲ್ಲ. ಆದರೆ, ಫಣೀಂದ್ರನ ಹತ್ಯೆ ವೇಳೆ ತಡೆಯಲು ಬಂದ ವಿನು ಕುಮಾರ್ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News