ಪ್ರಜ್ವಲ್‌ ಅನರ್ಹತೆ ಬೆನ್ನಲ್ಲೇ ಎಚ್‌ ಡಿ ರೇವಣ್ಣ, ಸೂರಜ್‌, ದೂರುದಾರ ಎ. ಮಂಜು ಅವರಿಗೂ ಸಂಕಷ್ಟ...!

Update: 2023-09-01 14:13 GMT
  • ಎಚ್.ಡಿ ರೇವಣ್ಣ | ಪ್ರಜ್ವಲ್‌ ರೇವಣ್ಣ |  ಎ.ಮಂಜು

ಬೆಂಗಳೂರು: ಚುನಾವಣಾ ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕರೂ ಆಗಿರುವ ಪ್ರಜ್ವಲ್ ರೇವಣ್ಣ ಅವರ ತಂದೆ ಎಚ್.ಡಿ.ರೇವಣ್ಣ ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎ. ಮಂಜು ಅವರಿಗೆ ನೋಟಿಸ್ ಜಾರಿ ಮಾಡಲು ರಿಜಿಸ್ಟ್ರಾರ್‌ ಗೆ  ನ್ಯಾಯಾಲಯ ಆದೇಶಿಸಿದೆ.

ಎಂ.ಮಂಜುಗೆ ಸಂಕಷ್ಟ: ಹೈಕೋರ್ಟ್, ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ ಬೆನ್ನಲ್ಲೇ ಎ.ಮಂಜು ಅವರಿಗೂ ಸಂಕಷ್ಟ ಎದುರಾಗಿದೆ.  ಆಗ ಬಿಜೆಪಿಯಲ್ಲಿದ್ದ ಎ.ಮಂಜು ಅವರ ವಿರುದ್ಧ ಪ್ರಜ್ವಲ್ ರೇವಣ್ಣ ಅವರೂ ಮರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಕೂಡ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎ.ಮಂಜು ಕೂಡ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅದಲ್ಲದೇ ‘ನಿಮ್ಮನ್ನು ಏಕೆ ಅನರ್ಹಗೊಳಿಸಬಾರದು’ ಎಂದು ನೋಟಿಸ್ ನೀಡಿದೆ. ಇದಕ್ಕೆ ಎ.ಮಂಜು ಅವರು ಸಮರ್ಪಕ ಉತ್ತರ ನೀಡಬೇಕು. ಇಲ್ಲದಿದ್ದರೆ ಎ.ಮಂಜು ಅವರನ್ನೂ ಅನರ್ಹಗೊಳಿಸುವ ಸಾಧ್ಯತೆ ಇದೆ.

‘ಒಬ್ಬ ಜನಪ್ರತಿನಿಧಿ ಅನರ್ಹಗೊಂಡರೆ 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ’ ಎಂದು ಪ್ರಜಾಪ್ರತಿನಿಧಿ ಕಾಯ್ದೆ ಹೇಳುತ್ತದೆ. ಹೀಗಾಗಿ, ಇದು ಲೋಕಸಭಾ ಚುನಾವಣೆ ಪ್ರಕರಣವಾದರೂ ಕೂಡ ವಿಧಾನಸಭೆ ಚುನಾವಣೆಗೂ ಅನ್ವಯಿಸುತ್ತದೆ. ಒಂದು ವೇಳೆ ಎ. ಮಂಜು ಅನರ್ಹಗೊಂಡರೆ ಅವರ ಅರಕಲಗೂಡು ಕ್ಷೇತ್ರದ ಶಾಸಕ ಸ್ಥಾನವೂ ಅಸಿಂಧುಗೊಳ್ಳುತ್ತದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಎಚ್.ಡಿ.ರೇವಣ್ಣರಿಗೂ ನೋಟಿಸ್: ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರಿಗೂ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಅಕ್ರಮಕ್ಕೆ ಸಹಕರಿಸಿದ ಅರೋಪದಲ್ಲಿ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ದೂರುದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ. ನೋಟಿಸ್ ನೀಡಿರುವುದರಿಂದ ಎ.ಮಂಜು ಹಾಗೂ ಎಚ್.ಡಿ.ರೇವಣ್ಣ ಕೂಡ ಅನರ್ಹರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪ್ರಕರಣವೇನು?: 2019ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಪರಾಜಿತ ಅಭ್ಯರ್ಥಿ ಎ.ಮಂಜು ಹೈಕೋರ್ಟ್ ಮೊರೆ ಹೋಗಿದ್ದರು. ಅದರ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಈಗ ತೀರ್ಪು ನೀಡಿದ್ದು, ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದೆ.

ಪ್ರಜ್ವಲ್‍ಗೆ ಮೇಲ್ಮನವಿ ಸಲ್ಲಿಸಲು ಅವಕಾಶ: ಪ್ರಜ್ವಲ್ ರೇವಣ್ಣ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈಗ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದು, ತಿಂಗಳ ಒಳಗಾಗಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿಯನ್ನು ಪ್ರಜ್ವಲ್ ರೇವಣ್ಣ ಸಲ್ಲಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News