ಕೃಷಿ ಯಂತ್ರೋಪಕರಣ ಉತ್ಪಾದನೆ | ರಾಜ್ಯದಲ್ಲಿ ಹೂಡಿಕೆಗೆ ಸಚಿವ ಚಲುವರಾಯಸ್ವಾಮಿ ಆಹ್ವಾನ

Update: 2024-08-28 13:30 GMT

ಅಯೋವಾ(ಅಮೇರಿಕ) : ಅಮೇರಿಕಾದ ಅಯೋವಾ ಪ್ರಾಂತ್ಯದ ಬೂನೆ ನಗರದಲ್ಲಿ ನಡೆಯುತ್ತಿರುವ ಅತ್ಯಾಧುನಿಕ ಕೃಷಿ ಯಂತ್ರಗಳ ಬಹೃತ್ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿರುವ ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳ ಉತ್ಪಾದನೆಗೆ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಆಹ್ವಾನಿಸಿದ್ದಾರೆ.

ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಪ್ರದರ್ಶನ ಮೇಳಕ್ಕೆ ಭೇಟಿ ನೀಡಿರುವ ಚಲುವರಾಯಸ್ವಾಮಿ, ಹೊಸದಾಗಿ ಆವಿಷ್ಕಾರಗೊಂಡಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕವನ್ನಾಗಿಸಬೇಕಿದೆ. ಶ್ರಮ ಮತ್ತು ವೆಚ್ಚ ಕಡಿತಗೊಳಿಸಿ ಉತ್ಪಾದನೆ ಹೆಚ್ಚಿಸಲು ಇಂತಹ ಆಧುನಿಕ ಯಂತ್ರೋಪಕರಣಗಳ ಬಳಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಕೃಷಿ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಪ್ರಮುಖವಾಗಿ ರೋಬೋಟಿಕ್ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆಯಿಂದ ಚಲಿಸಲ್ಪಡುವ ಯಂತ್ರಗಳನ್ನು ಗಮನಿಸಿ ಮಾಹಿತಿ ಪಡೆದುಕೊಂಡ ಅವರು, ರಾಜ್ಯದ ವಿಭಿನ್ನ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಹಲವು ಬೆಳೆಗಳ ಬಿತ್ತನೆ, ನಿರ್ವಹಣೆ, ಕಟಾವಿಗೂ ನೆರವಾಗುವ ಹೊಸ ಯಂತ್ರಗಳು ಆವಿಷ್ಕಾರಗೊಂಡಿರುವುದನ್ನು ಗಮನಿಸಿದರು.

ಮೆಸ್ಸೆ ಫರ್ಗೂಸನ್, ಜಾನ್ ಡೀರ್, ಕುಬೋಟಾ, ಅಗ್ರಿ ಏರೋ ಸ್ಪೇಸ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ ಚಲುವರಾಯಸ್ವಾಮಿ, ಈ ದೊಡ್ಡ ಯಂತ್ರಗಳನ್ನು ಕರ್ನಾಟಕದಲ್ಲಿಯೇ ಉತ್ಪಾದನೆ ಮಾಡಲು ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಹಾಗಾಗಿ ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಆಹ್ವಾನಿಸಿದರು.

ಇದರ ಜೊತೆಗೆ ಕೃಷಿ ಸಚಿವರು ಬಿಡುವು ಮಾಡಿಕೊಂಡು ಅಮೇರಿಕಾದ ಕೃಷಿ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಗಳನ್ನು ಪರಿಶೀಲಿಸಿದರು. ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಅಪರ ಕೃಷಿ ನಿರ್ದೇಶಕ ವೆಂಕಟ ರಮಣ ರೆಡ್ಡಿ, ಕೆಪೆಕ್ ಅಧ್ಯಕ್ಷ ಹರೀಶ್, ವ್ಯವಸ್ಥಾಪಕ ನಿರ್ದೇಶಕ ಬಂಥನಾಳ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಸಚಿವರೊಂದಿಗೆ ಕೃಷಿ ಯಂತ್ರೋಪಕರಣ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News