ರಾಜ್ಯದ ಎಲ್ಲ ಖಾಸಗಿ ಶಾಲೆಗಳು ಆರ್‌ಟಿಇ ಅಡಿಯಲ್ಲಿ ಮಾನ್ಯತೆ ಪಡೆಯುವುದು ಕಡ್ಡಾಯ

Update: 2024-05-30 13:39 GMT

ಸಾಂದರ್ಭಿಕ ಚಿತ್ರ 

ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009 (RTE) ಮತ್ತು ಕಾಯ್ದೆಯಡಿ ರೂಪಿಸಲಾದ ನಿಯಮಗಳು-2012ರಡಿ ರಾಜ್ಯದ ಎಲ್ಲ ಖಾಸಗಿ ಶಾಲೆಗಳು (ಇತರೆ ಪಠ್ಯಕ್ರಮ ಒಳಗೊಂಡ ಶಾಲೆಗಳು) ಮಾನ್ಯತೆಯನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ-2009 ರ ಸೆಕ್ಷನ್-18ರ ಅಡಿಯಲ್ಲಿ ಎಲ್ಲಾ ಖಾಸಗಿ ಅನುದಾನಿತ ಮತ್ತು ಎಲ್ಲಾ ಪಠ್ಯಕ್ರಮದ ಖಾಸಗಿ ಅನುದಾನರಹಿತ ಶಾಲೆಗಳು ನಿಗದಿಪಡಿಸಿರುವ ಮಾನದಂಡಗಳನ್ನು ಅನುಪಾಲಿಸಿ, ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-11 ರಂತೆ ನಿಗದಿಪಡಿಸಿರುವ ನಮೂನೆ-1ರಲ್ಲಿ ಸ್ವಯಂ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ರೀತಿ ಪಡೆದ ಮಾನ್ಯತೆಯ ಅವಧಿಯು 5 ವರ್ಷಗಳಾಗಿರುತ್ತದೆ ಎಂದಿದ್ದಾರೆ.

ಯಾವುದೇ ಶಾಲೆಯು ನಿಗದಿಪಡಿಸಿರುವ ಮಾನದಂಡಗಳನ್ನು ಅಥವಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ(ಕೇಂದ್ರ ಪಠ್ಯಕ್ರಮ ಮಂಡಳಿ ಅಫಿಲೇಷನ್ ನೀಡಿ ಕಾಲಕಾಲಕ್ಕೆ ನವೀಕರಿಸಿಕೊಂಡಿದಾಗ್ಯೂ) ಅಂತಹ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗುವುದು. ಅಲ್ಲದೆ ಯಾವುದೇ ಶಾಲೆಯು ಮಾನ್ಯತೆ ಪಡೆಯದೇ/ಮಾನ್ಯತೆ ನವೀಕರಿಸದೇ ಶಾಲೆಯನ್ನು ಮುಂದುವರಿಸುತ್ತಿದ್ದಲ್ಲಿ ಅಥವಾ ಮಾನ್ಯತೆಯನ್ನು ಹಿಂಪಡೆದ ನಂತರವೂ ಶಾಲೆಯನ್ನು ಮುಂದುವರೆಸುತ್ತಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರಾಜ್ಯ, ಕೇಂದ್ರ ಪಠ್ಯಕ್ರಮದಲ್ಲಿ ನೋಂದಾಯಿತ ಶಾಲೆಯಾಗಿದ್ದರೂ ಆರ್‍ಟಿಇ ಅಡಿ ಮಾನ್ಯತೆ ಪಡೆಯದೇ ಹಾಗೂ ಮಾನ್ಯತೆ ನವೀಕರಿಸದೇ ನಡೆಯುತ್ತಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News