ವೈದ್ಯಕೀಯ ಸರಬರಾಜು ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಸಿಎಂಗೆ ದೂರು

Update: 2023-11-18 17:09 GMT

ಬೆಂಗಳೂರು, ನ.18: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ(ಕೆಎಸ್‍ಎಂಎಸ್‍ಸಿಎಲ್) ನಿರಂತರ ಭ್ರಷ್ಟಾಚಾರ ನಡೆಯುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಗೆ ದೂರು ದಾಖಲಾಗಿದೆ.

ಶನಿವಾರ ಸಾಮಾಜಿಕ ಕಾರ್ಯಕರ್ತ ರಮೇಶ್ ಕುಮಾರ್ ಎಂಬುವರು ದೂರು ಸಲ್ಲಿಕೆ ಮಾಡಿದ್ದು, ಔಷಧ ದಾಸ್ತಾನು ಮಾಡಿಕೊಳ್ಳದಿರುವುದು, ಟೆಂಡರ್‌ನಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘನೆ, ಬಾಕಿ ಔಷಧ ಬಿಲ್‍ಗಳಿಗೆ ಹಣ ಪಾವತಿಸಲು ವಿಳಂಬ, ಜೀವ ರಕ್ಷಕ ಔಷಧ ಕೊರತೆ, ಟೆಂಡರ್‌ನಲ್ಲಿ ನಿಗದಿತ ಮೊತ್ತಗಿಂತ ಅಧಿಕ ನಮೂದಿಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು, ಎಂಡಿ ಹುದ್ದೆಗೆ ಅರ್ಹತೆ ಹೊಂದಿಲ್ಲದ ಕೆಎಎಸ್ ದರ್ಜೆ ಅಧಿಕಾರಿ ನೇಮಕ ಸೇರಿ ನಿಗಮದ ಅವ್ಯವಸ್ಥೆ ಬಗ್ಗೆ ಎರಡು ಪುಟಗಳ ಒಳಗೊಂಡ ದೂರನ್ನು ಸಲ್ಲಿಸಲಾಗಿದೆ.

 ಆರೋಗ್ಯ ಇಲಾಖೆ ಕೆಎಸ್‍ಎಂಎಸ್‍ಸಿಎಲ್ ಬ್ರಹ್ಮಾಂಡ ಭ್ರಷ್ಟಾಚಾರ ಮೀತಿ ಮೀರಿದೆ. ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ರೂ.ಅಧಿಕ ಮೊತ್ತದ 733 ಔಷಧಗಳಿಗೆ ಬೇಡಿಕೆ ಬಂದಿದೆ. ಆದರೆ, ನಿಗದಿತ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಔಷಧ ದಾಸ್ತಾನ ಮಾಡಿಕೊಳ್ಳಲು ನಿಗಮ ವಿಫಲವಾದ ಹಿನ್ನೆಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗಿದೆ.

ಪ್ರತಿ ವರ್ಷ ಮೇ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಜೂನ್ ಅಥವಾ ಜುಲೈನಲ್ಲಿ ಔಷಧ ಖರೀದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡಬೇಕಿತ್ತು. ಆದರೆ, ನವೆಂಬರ್ ಕಳೆಯುತ್ತಾ ಬರುತ್ತಿದ್ದರೂ ಇದುವರೆಗೆ ಆಸ್ಪತ್ರೆಗಳಿಗೆ ಔಷಧ ಸರಬರಾಜು ಆಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶೇ.100 ಔಷಧಗಳ ಪೂರೈಕೆ ಮಾಡಿರುವ ಕಂಪನಿಗಳಿಗೆ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತಿಲ್ಲ. ಆನ್‍ಲೈನ್‍ನಲ್ಲಿ ಎಲ್ಲ ಬಿಲ್‍ಗಳು ಲಭ್ಯವಿದ್ದರೂ ಬೇಕಾಂತಲೇ ಅಧಿಕಾರಿಗಳು ಪೇಮೆಂಟ್ ಮಾಡುತ್ತಿಲ್ಲ. 2012ರಿಂದ ಔಷಧ ಬಿಲ್‍ಗಳ ಜತೆಗೆ ಕೋಟ್ಯಂತರ ರೂ.ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. 30 ದಿನದೊಳಗೆ ಔಷಧ ಬಿಲ್‍ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ ಇವುಗಳನ್ನು ಬಗೆಹರಿಸುತ್ತಿಲ್ಲ.ರಾಷ್ಟ್ರೀಂಯ ಆರೋಗ್ಯ ಅಭಿಯಾನ (ಎನ್‍ಎಚ್‍ಎಂ) ಹಾಗೂ ನಿಗದಮ ಅಧಿಕಾರಿಗಳ ನಡುವಿನ ತಿಕ್ಕಾಟದಿಂದ 350 ಕೋಟಿ ರೂ.ಮೊತ್ತದ ಔಷಧ ಬಿಲ್‍ಗಳಿಗೆ ಬಗೆಹರಿಯದೆ ಬಾಕಿ ಉಳಿದಿದೆ ಎಂದು ಬಗ್ಗೆ ಪತ್ರದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News