ಚುನಾವಣಾ ಅಕ್ರಮ ಆರೋಪ: ಎಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್

Update: 2023-09-04 14:07 GMT

ಬೆಂಗಳೂರು, ಸೆ.4: ಚುನಾವಣಾ ಅಕ್ರಮಗಳನ್ನು ನಡೆಸಿ ಶಾಸಕ ಎಚ್.ಡಿ.ರೇವಣ್ಣ ಅವರು ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಹೈಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.

ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ.

ಈ ಹಿಂದೆ ಕೂಡ ವಿಚಾರಣೆ ನಡೆಸಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರತಿವಾದಿ ರೇವಣ್ಣ ಅವರು ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿದ ಹೈಕೋರ್ಟ್ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿನ ಅಂಶಗಳು: ವಕೀಲ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ ಭಾರಿ ಅಕ್ರಮಗಳನ್ನು ಎಸಗಿ ಜಯಗಳಿಸಿದ್ದಾರೆ. ಜೊತೆಗೆ, ಮತ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ, ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News