'ಗೃಹಲಕ್ಷ್ಮಿ' ನೋಂದಣಿಗೆ ಹಣ ವಸೂಲಿ ಆರೋಪ: 3 ಸೈಬರ್ ಕೇಂದ್ರ ಮಾಲಕರ ವಿರುದ್ಧ FIR
ರಾಯಚೂರು, ಜು. 25: ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಹಣ ವಸೂಲಿ ಮಾಡಿದ ಆರೋಪದ ಮೇಲೆ 3 ಸೈಬರ್ ಕೇಂದ್ರಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಕೆಲ ಸೈಬರ್ ಕೇಂದ್ರಗಳಲ್ಲಿ ಜನರಿಂದ ಪ್ರತಿ ಗೃಹಲಕ್ಷ್ಮಿ ನೋಂದಣಿಗೆ 100 ರಿಂದ 200 ರೂ. ವರೆಗೆ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಮಾನ್ವಿ ತಹಶೀಲ್ದಾರ್ ಎಲ್‌ಡಿ ಚಂದ್ರಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಹಣ ವಸೂಲಿ ಮಾಡಿರುವುದು ತಿಳಿದುಬಂದಿದೆ.
ಹಣ ವಸೂಲಿ ಮಾಡಿದ ಆರೋಪದ ಮೇಲೆ ಪಟ್ಟಣದ 3 ಸೈಬರ್ ಕೇಂದ್ರ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
► ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಎಚ್ಚರಿಕೆ
'ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಯಾರೇ ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಈಗಾಗಲೆ 3 ಜನರ ಲಾಗಿನ್ ಐಡಿ ವಾಪಸ್ ಪಡೆಯಲಾಗಿದೆ. ಸರಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಅಂತವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗುವುದು' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.