ನಿವೇಶನ ಹಕ್ಕುಪತ್ರ ನೀಡಲು ನಿರ್ಲಕ್ಷ್ಯ ಆರೋಪ: ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಕುಳಿತ ಗ್ರಾ.ಪಂ ಉಪಾಧ್ಯಕ್ಷ

Update: 2023-09-05 12:48 GMT

ಮೂಡಿಗೆರೆ, ಸೆ.5: ಕಳೆದ ಎರಡು ವರ್ಷಗಳಿಂದ ತಾಲೂಕಿನ ಮರ್ಕಲ್, ನಿಡುವಳೆ ಗ್ರಾಮದ 70ಕ್ಕೂ ಅಧಿಕ ಮಂದಿ 94ಸಿ ನಮೂನೆಯಲ್ಲಿ ನಿವೇಶನ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 30ಕ್ಕೂ ಅಧಿಕ ಮಂದಿ ಸರಕಾರಕ್ಕೆ ಹಣ ಶುಲ್ಕವನ್ನೂ ಪಾವತಿ ಮಾಡಿದ್ದಾರೆ. ಆದರೆ ತಹಶೀಲ್ದಾರ್ ಅವರು ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ಪಟ್ಟಣದ ತಾಲೂಕು ಕಚೇರಿ ಎದುರು ಏಕಾಂಗಿಯಾಗಿ ಧರಣಿ ಆರಂಭಿಸಿದ್ದಾರೆ.

94ಸಿ ನಮೂನೆಯಲ್ಲಿ ನಿವೇಶನಗಳ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಡವರಿಗೆ ಹಕ್ಕುಪತ್ರ ನೀಡಲು ತಹಶೀಲ್ದಾರ್ ಸತಾಯಿಸುತ್ತಿದ್ದಾರೆಂದು ಆರೋಪಿಸಿ ನಿಡುವಾಳೆ ಗ್ರಾಪಂ ಉಪಾಧ್ಯಕ್ಷ ನವೀನ್ ಮಂಗಳವಾರ ತಾಲೂಕು ಕಚೇರಿ ಎದುರೇ ದಿಢೀರ್ ಧರಣಿ ಆರಂಭಿಸಿದ್ದು, ಈ ವೇಳೆ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ನಿವೇಶನದ ಹಕ್ಕು ಪತ್ರ ಪಡೆಯಲು 94ಸಿಯಲ್ಲಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಹಕ್ಕುಪತ್ರ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ಗ್ರಾಮಸ್ಥರು ಕಚೇರಿಗಳಿಗೆ ಅಲೆದು ಅಲೆದು ರೋಸಿ ಹೋಗಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಬಡಜನರ ಸಂಕಷ್ಟ ನಿವಾರಣೆಯಾಗದು. ಹಾಗಾಗಿ ಜನರ ಪರವಾಗಿ ಖುದ್ದಾಗಿ ನಾನೇ ಬಂದು ವಿಚಾರಿಸಿದರೂ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಜನಪ್ರತಿನಿಧಿಗಳ ಮಾತಿಗೂ ಇಲ್ಲಿ ಬೆಲೆ ಇಲ್ಲ. ಇನ್ನು ಸಾಮಾನ್ಯ ಜನರ ಗತಿಯೇನು?, ಸಮಸ್ಯೆ ನಿವಾರಣೆಯಾಗುವವರೆಗೂ ಏಕಂಗಿಯಾಗಿ ಮೌನ ಪ್ರತಿಭಟನೆ ಮುಂದುವರೆಸುತ್ತೇನೆʼʼ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News