ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ; ಮಹಿಳೆ ಆತ್ಮಹತ್ಯೆ

Update: 2023-10-06 13:50 GMT

ದೇವೀರಮ್ಮ  - ಮೃತ ಮಹಿಳೆ 

ಕಡೂರು, ಅ.6: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ಮನೆ ಬಾಗಿಲಿಗೆ ಬಂದು ಅವಮಾನಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ವರದಿಯಾಗಿದೆ.

ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ(58) ಎಂಬವರೇ ಫೈನಾನ್ಸ್ ಸಿಬ್ಬಂದಿಯ ಅವಮಾನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಆಗಿದ್ದು, ಗುರುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ದೇಹವನ್ನು ಪುತ್ರ ಹಾಗೂ ದೂರುದಾರ ರಾಘವೇಂದ್ರ ನೋಡಿದ್ದು ಮಧ್ಯಾಹ್ನ ಕಡೂರು ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ: ದೇವೀರಮ್ಮ ಅವರು ಗ್ರಾಮೀಣ ಕೂಟ ಎಂಬ ಹೆಸರಿನ ಮೈಕ್ರೋ ಫೈನಾನ್ಸ್ ಮೂಲಕ ಒಮ್ಮೆ 48 ಸಾವಿರ, ಮತ್ತೊಮ್ಮೆ 30 ಸಾವಿರ ಸಾಲ ಪಡೆದಿದ್ದು, ಸಾಲದ ಕಂತನ್ನು ಪಾವತಿ ಮಾಡಿಲ್ಲ ಎಂದು ಗ್ರಾಮೀಣ ಕೂಟದ ಸಿಬ್ಬಂದಿ ಬುಧವಾರ ಸಂಜೆ ಅವರ ಮನೆಯ ಮುಂದೆ ಸಾಲ ಕೇಳುವ ನೆಪದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಮಯದಲ್ಲಿ ದೇವೀರಮ್ಮ ಅವರು ಪುತ್ರ ರಾಘವೇಂದ್ರ ಅವರ ಜತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸೊಸೆ ದೂರವಾಣಿ ಮೂಲಕ ಕರೆಮಾಡಿ ಘಟನೆಯ ಮಾಹಿತಿ ನೀಡಿದ್ದು, ಮನೆಗೆ ಬಂದ ಪುತ್ರ ಮತ್ತು ತಾಯಿ ದೇವೀರಮ್ಮ ಹಾಗೂ ಫೈನಾನ್ಸ್ ಸಿಬ್ಬಂದಿ ನಡುವೆ ಚರ್ಚೆ ನಡೆದಿದ್ದು, ಅಂತಿಮವಾಗಿ ಪುತ್ರ ರಾಘವೇಂದ್ರ ಅವರು ಶುಕ್ರವಾರ ಹಣ ಪಾವತಿಸುವುದಾಗಿ ಬರವಸೆ ನೀಡಿದ ಹಿನ್ನೆಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ತೆರಳಿದ್ದಾರೆ ಎನ್ನಲಾಗಿದೆ.

ಆದರೆ ಘಟನೆ ನಡೆದ ದಿನ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ ದೇವೀರಮ್ಮ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದು, ಬೆಳಗ್ಗೆ ಮನೆ ಮಂದಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ರಾಘವೇಂದ್ರ ಗ್ರಾಮೀಣ ಕೂಟದ ಮೇಲ್ವಿಚಾರಕ ಶಂಕರಾನಾಯ್ಕ, ಸಿಬ್ಬಂದಿ ರುಬೀನ, ಉಷಾ ಎಂಬವರ ಮೇಲೆ ದೂರು ನೀಡಿದ್ದು, ಇವರ ಅಮಾನುಷ ವರ್ತನೆಯಿಂದಲೇ ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ‌, ʼʼ ಮೈಕ್ರೋ ಫೈನಾನ್ಸ್ ಗಳ ಕಾಟದಿಂದ ಬಹಳಷ್ಟು ಅಮಾಯಕರಿಗೆ ತೊಂದರೆಗೆ ಒಳಗಾಗುತ್ತಿದ್ದಾರೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ರೀತಿಯ ಫೈನಾನ್ಸ್‍ಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದುʼʼ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News