‘ಆದಾಯ, ಜಾತಿ ಪ್ರಮಾಣ ಪತ್ರ’ಕ್ಕೆ ಲಂಚದ ಬೇಡಿಕೆ ಆರೋಪ: 9 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Update: 2024-01-20 15:31 GMT

ಬೆಂಗಳೂರು: ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು ಲಂಚಕ್ಕೆ ಬೇಡಿಕೆ ಆರೋಪದಡಿ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 9 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿರುವುದು ವರದಿಯಾಗಿದೆ.

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ 9 ತಂಡದಿಂದ 20ಕ್ಕೂ ಹೆಚ್ಚು ಅಧಿಕಾರಿಗಳು ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಸೇರಿದಂತೆ ನಾಲ್ಕು ತಾಲೂಕು ಕಚೇರಿಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ 5 ತಾಲೂಕು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವುದಾಗಿ ಗೊತ್ತಾಗಿದೆ.

ಎರಡು ಜಿಲ್ಲೆಗಳ 9 ತಾಲೂಕು ಕಚೇರಿಗಳ ವಿರುದ್ಧ 599 ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದು, ಇದಿಷ್ಟೇ ಅಲ್ಲದೆ ಹಲವಾರು ಸ್ವಯಂಪ್ರೇರಿತ ಪ್ರಕರಣ, ಅನಿಯಮಿತ ಪ್ರಕರಣಗಳು ದಾಖಲಾಗಿವೆ. ಏಜೆಂಟ್ ಹಾವಳಿ, ಹಣ ನೀಡದೆ ಕೆಲಸ ಆಗಲ್ಲ ಎಂಬ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ಆದೇಶದ ಮೇರೆಗೆ 9 ತಾಲೂಕು ಕಚೇರಿಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್ ಗಳ ಮುಂದೆಯೇ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಜನರಿಗೆ ಸೂಕ್ತ ನ್ಯಾಯ ಸಿಗಬೇಕು. ಸಾರ್ವಜನಿಕರು ಈ ಬಗ್ಗೆ ಭಯಪಡುವುದು ಬೇಡ. ಲೋಕಾಯುಕ್ತ ಕಾಯ್ದೆಯಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News