ಬೆಂಗಳೂರು : ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

Update: 2023-11-21 14:57 GMT

ಬೆಂಗಳೂರು : ತೆರಿಗೆ ವಂಚನೆ ಆರೋಪದ ಹಿನ್ನಲೆಯಲ್ಲಿ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ನಗರದ ಮಾಗಡಿ ರಸ್ತೆ, ಆಡುಗೋಡಿಯ ಆ್ಯಕ್ರೋಪೊಲಿಸ್ ಅಪಾರ್ಟ್ಮೆಂಟ್  ನಲ್ಲಿರುವ ಮನೆ ಸೇರಿದಂತೆ ಹಲವೆಡೆ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನ.21ರ ಮಂಗಳವಾರ ಬೆಳಗ್ಗೆ 7 ಗಂಟೆಗೆ ಎರಡು ಇನೋವಾ ಕಾರ್‌ ನಲ್ಲಿ ಬಂದ ಆರು ಅಧಿಕಾರಿಗಳ ತಂಡ ಮಾಗಡಿ ರಸ್ತೆಯಲ್ಲಿರುವ ಉದ್ಯಮಿ ಪುನೀತ್ ಬೊರಾ ಎನ್ನುವವರ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆ ಜ್ಯುವೆಲ್ಲರಿ ಅಂಗಡಿ ಮಾಲೀಕರು, ಗುತ್ತಿಗೆದಾರರ ಮನೆ-ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ರಾಜಾಜಿನಗರದ ಇಂಡಸ್ಟ್ರೀಯಲ್ ಎಸ್ಟೇಟ್ ಬಳಿಯಿರುವ ಪಿ.ಎಸ್.ಆಗ್ರೋ ಫುಡ್ ಎಲ್ಎಲ್ಪಿ ಕಾರ್ಖಾನೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ಮಾಣಿಕ್ ಮೇವಾ ಸ್ಟೋರ್ ಮೇಲೆ ದಾಳಿ ನಡೆದಿತ್ತು.

ಈ ಎರಡು ಆಹಾರ ಕಂಪೆನಿಗಳು ಒಣ ಹಣ್ಣುಗಳ ವ್ಯಾಪಾರ ನಡೆಸುತ್ತಿವೆ. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ಅ.16ರ ಬೆಳಗಿನಜಾವ ಸುಮಾರು 10ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News