ಕಾಂಗ್ರೆಸ್ ನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮೈತ್ರಿ: ಬಸವರಾಜ ಬೊಮ್ಮಾಯಿ ಸಮರ್ಥನೆ

Update: 2023-09-11 07:27 GMT

ಹುಬ್ಬಳ್ಳಿ:  ರಾಜಕಾರಣ ನಿಂತ ನೀರಲ್ಲ, ಕೆಲವು ಉದ್ದೇಶಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಗೆ ಸಮರ್ಥನೆ ಮಾಡಿಕೊಂಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಂದು ಕಡೆ ಅಭಿವೃದ್ಧಿ ಸಂಪೂರ್ಣ ಸ್ಥಗಿತ, ಮತ್ತೊಂದು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಒಂದು ಹಿಡಿ ಮಣ್ಣನ್ನು ರಸ್ತೆಗೆ ಹಾಕಲಾರದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ರೀತಿ ಆದರೆ ಇಡೀ ರಾಜ್ಯ ಅಧೋಗತಿಗೆ ಹೋಗುತ್ತದೆ. ಇದನ್ನು ನಿಲ್ಲಿಸುವ ಉದ್ದೇಶದಿಂದ ನಾವಂತೂ ಹೋರಾಟ ಮಾಡುತ್ತಿದ್ದೇವೆ ಎಂದರು.

ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಜವಾಬ್ದಾರಿ. ವಿರೋಧ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕೆಂಬುದು ರಾಜ್ಯದ ಜನರ ಅಪೇಕ್ಷೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರ ಬರ್ತಾ ಇವೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಮಾತುಕತೆ ನಡೆದಿದೆ.ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಲ್ಲವೇ ಆಗ ಇಬ್ಬರೂ ಅಸಹಾಯಕರಿದ್ದರೇ ಎಂದು ಪ್ರಶ್ನಿಸಿದರು.

ಜೆಡಿಎಸ್ ಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದನ್ನ ವಸ್ತು ಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳ ಅಡ್ಡಿ ವಿಚಾರವಾಗಿ ಮಾತನಾಡಿದ ಅವರು, ಇದೆಲ್ಲವೂ ಕುಂಟು ನೆಪ ಈ ಹಿಂದೆಯೂ ಇದೇ ನಿಯಮಗಳಿದ್ದವು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ..? ನಾವು ಸಹ ಕೇಂದ್ರ ಸರ್ಕಾರ ಕೊಡುವುದಕ್ಕಿಂತ ಹೆಚ್ಚಿನ ದುಡ್ಡನ್ನು ಕೊಟ್ಟೆವು. ನಿಯಮ ಬದಲಾವಣೆಗಾಗಿ ನಾವು ಕಾದುಕೊಂಡು ಕೂತಿದ್ದೆವಾ..? ಬರ ಪರಿಹಾರದ ಎರಡು ಪಟ್ಟು ಮೊತ್ತ ಕೊಟ್ಟೆವು. ರಾಜ್ಯ ಸರ್ಕಾರಕ್ಕೆ ಜನರಿಗೆ ಸಹಾಯ ಮಾಡಬೇಕೆಂಬ ಮನಸಿಲ್ಲ. ನ್ಯಾಷನಲ್ ಡಿಸಾಸ್ಟರ್ ನ ಮೊದಲನೇ ಕಂತು ಈಗಾಗಲೇ ಬಂದಿದೆ. ಇವರಿಗೆ ರೈತರ ಸಂಕಷ್ಟ ಪರಿಹಾರ ಮಾಡುವ ಮನಸ್ಸಿಲ್ಲ. ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ಕೂಡಲೇ ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಖಾಸಗಿ ಬಸ್ಸುಗಳ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಖಾಸಗಿ ಬಸ್ ಮಾಲೀಕರ ಸಮಸ್ಯೆ ಬಗೆಹರಿಸ್ತೀವಿ ಅಂತ ಹೇಳ್ತಾನೇ ಬಂದ್ರು. ಸುಮ್ಮನೆ ಮೀಟಿಂಗ್ ಮಾಡಿದರು,‌ಈಗ ಖಾಸಗಿ ಬಸ್ ಮಾಲೀಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಬೇಕು ಎಂದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News