ಅಮಿತ್ ಶಾ-ಬಿಎಸ್‍ವೈ ಸಭೆ ಮುಂದೂಡಿಕೆ: ವಿಪಕ್ಷ ನಾಯಕನ ಆಯ್ಕೆ ವಿಳಂಬ ಸಾಧ್ಯತೆ?
ಬೆಂಗಳೂರು, ಜು.2: ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಿಗದಿಯಾಗಿದ್ದ ಪಕ್ಷದ ಪ್ರಮುಖ ನಾಯಕರ ಸಭೆ ಮುಂದೂಡಲ್ಪಟ್ಟಿದೆ ಎಂದು ತಿಳಿದು ಬಂದಿದೆ.
ಇಂದು ರಾತ್ರಿ 8 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಅಮಿತ್ ಶಾ ಸಭೆ ನಿಗದಿಗೊಳಿಸಿದ್ದರು. ಅದರಂತೆ, ಯಡಿಯೂರಪ್ಪ ನಿಗದಿತ ಅವಧಿಯಂತೆ ಹೊಸದಿಲ್ಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಅಮಿತ್ ಶಾ ನಿವಾಸಕ್ಕೆ ಆಗಮಿಸಿದ್ದರು.
ಆದರೆ, ಅಮಿತ್ ಶಾ ಮತ್ತೊಂದು ಸಭೆಯಲ್ಲಿ ಭಾಗಿಯಾಗಿದ್ದರಿಂದ ಯಡಿಯೂರಪ್ಪ ಜೊತೆ ಚರ್ಚೆ ಸಾಧ್ಯವಾಗಿಲ್ಲ. ಅಲ್ಲದೆ, ಪ್ರಸಕ್ತ ನಡೆಯುತ್ತಿರುವ ಸಭೆಯ ಬಳಿಕ ಕರೆಸಿಕೊಳ್ಳುವುದಾಗಿ ಅಮಿತ್ ಶಾ ಹೇಳಿದ್ದರಿಂದ, ಯಡಿಯೂರಪ್ಪ ತಮ್ಮ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಹಿಂದಿರುಗಿದರು.
ಸೋಮವಾರದಿಂದ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಆರಂಭವಾಗುತ್ತಿರುವುದರಿಂದ, ಸದನದಲ್ಲಿ ಸರಕಾರವನ್ನು ಎದುರಿಸುವ ಪ್ರತಿಪಕ್ಷದ ನೇತೃತ್ವವನ್ನು ಯಾರು ವಹಿಸಲಿದ್ದಾರೆಂಬ ಕುತೂಹಲಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾದಲ್ಲಿ ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಪರಿಷತ್ತಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.