ನಿಜಗುಣಾನಂದ ಸ್ವಾಮೀಜಿಗೆ ಮತ್ತೊಂದು ಬೆದರಿಕೆ ಪತ್ರ: ಮೂವರು ಸಚಿವರು ಸೇರಿ ಸಾಹಿತಿ, ನಟರ ಹೆಸರು ಉಲ್ಲೇಖ

Update: 2023-09-30 14:57 GMT

ನಿಜಗುಣಾನಂದ ಸ್ವಾಮೀಜಿ | ಪ್ರಕಾಶ್‌ ರಾಜ್‌ 

ಬೆಳಗಾವಿ, ಸೆ.30: ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಸೇರಿ ರಾಜ್ಯದ ಮೂವರು ಸಚಿವರು, ಸಾಹಿತಿಗಳು ಮತ್ತು ಸಿನಿಮಾ ನಟರಿಗೆ ಜೀವ ಬೆದರಿಕೆ ಹಾಕಿರುವ ಅನಾಮಧೇಯ ಪತ್ರವೊಂದು ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆಯೂ ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರವೊಂದು ಬಂದಿತ್ತು. ಇದೀಗ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿದ್ದು, ರಾಜ್ಯದ ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಅವರ ಹೆಸರುಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದಲ್ಲಿ ಏನಿದೆ..?: ನಿಜಗುಣಾನಂದ, ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ. ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಎಸ್.ಜಿ ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್,ಪ್ರೊ.ಭಗವಾನ್, ಪ್ರೊ.ಮಹೇಶ್ ಚಂದ್ರ, ಬಿ.ಟಿ.ಲಲಿತಾನಾಯ್ಕ್, ನಟ ಚೇತನ್, ನಟ ಪ್ರಕಾಶ್ ರಾಜ್. ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಹಾಗೂ ಡಾ.ಸಿ.ಎಸ್.ದ್ವಾರಕಾನಾಥ, ದೇವನೂರು ಮಹದೇವ, ಬಿ.ಎಲ್.ವೇಣು ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಮತಾಂಧ ಮುಸ್ಲಿಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡುತ್ತಿರುವುದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದಿಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ಧೈರ್ಯವಿದ್ದರೆ ಹೇಳಿ ಇಲ್ಲವಾದರೆ ನಿಮ್ಮ ಕೊನೆಯ ದಿನಗಳನ್ನು ಎಣಿಸಿ’ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ಎಸ್‍ಪಿ ಭೀಮಾಶಂಕರ ಗುಳೇದ, ‘ಚನ್ನಮ್ಮ ಕಿತ್ತೂರು ತಾಲೂಕಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಶಿವಾಜಿ ರಾವ್ ಜಾಧವ್ ಎಂಬಾತನೆ ಬಂಧಿತ ಆರೋಪಿ. ಒಂದೂವರೆ ತಿಂಗಳ ಹಿಂದೆ ನಿಜಗುಣಾನಂದ ಸ್ವಾಮೀಜಿಗೆ ಬೆದರಿಕೆ ಪತ್ರ ಬಂದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಜೊತೆಗೆ ಒಂದು ವಾರದ ಹಿಂದೆ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆಯೂ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೆವು. ಈ ಎಲ್ಲ ಬೆದರಿಕೆ ಪತ್ರಗಳನ್ನು ಬರೆದಿರುವುದು ಇದೇ ಆರೋಪಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News