384 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಮಾ.4ರಿಂದ ಅರ್ಜಿ ಸಲ್ಲಿಕೆ ಆರಂಭ

Update: 2024-02-26 15:22 GMT

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು 2023-24ನೆ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್' (ಕೆಎಎಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಮಾ.4ರಿಂದ ಎ.3ರ ವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ಶುಲ್ಕ ಸಾಮಾನ್ಯ ವರ್ಗದವರಿಗೆ 600ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕವನ್ನು ನೀಗಧಿಪಡಿಸಿದ್ದು, ಎಸ್ಸಿ, ಎಸ್ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕನಿಷ್ಠ 21ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 38, ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 41 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ ಆಗಿರುತ್ತದೆ.

ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ-ಕ) ಸೇರಿದಂತೆ ಒಟ್ಟಾರೆ 384 ಹುದ್ದೆಗಳಲ್ಲಿ ‘ಗ್ರೂಪ್ ಎ' 159, ‘ಗ್ರೂಪ್ -ಬಿ' 225 ಹುದ್ದೆಗಳಿವೆ. ಪೂರ್ವಭಾವಿ ಪರೀಕ್ಷೆ (ಬಹುಆಯ್ಕೆ ಮಾದರಿಯ ಪ್ರಶ್ನೆಗಳು), ಮುಖ್ಯ ಪರೀಕ್ಷೆ (ವಿವರಣಾತ್ಮಕ) ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳಲ್ಲಿ ಈ ನೇಮಕಾತಿ ನಡೆಯಲಿದೆ. ಮೇ 5ರಂದು ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ kpsc.kar.nic.in ಆಯೋಗದ ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಕೆಪಿಎಸ್ಸಿ ಪ್ರಕಟನೆ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News