ಸಿಕ್ಕಿಂ ಮೂಲದ ಯುವಕನ ಮೇಲೆ ಹಲ್ಲೆ ಆರೋಪ: ಎಫ್‍ಐಆರ್ ದಾಖಲು
ಬೆಂಗಳೂರು, ಆ.19: ವಿವಾಹ ಮಹೋತ್ಸವದ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುವಾಗ ಮೂವರು ದುಷ್ಕರ್ಮಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಸಿಕ್ಕಿಂ ಮೂಲದ ಯುವಕನ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಆ.15ರ ಮಧ್ಯರಾತ್ರಿ ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ದುಷ್ಕರ್ಮಿಗಳು ‘ಚೈನೀಸ್, ಚೈನೀಸ್’ ಎಂದು ಹೇಳಿ ಯುವಕನ ಮೇಲೆ ಹಲ್ಲೆಗೈದಿದ್ದು, ಹಲ್ಲೆಗೊಳಗಾದ ಯುವಕನನ್ನು ಪಶ್ಚಿಮ ಸಿಕ್ಕಿಂ ಮೂಲದ ಕೆ.ದಿನೇಶ್ ಸುಬ್ಬ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಕೆ.ದಿನೇಶ್‍ಸುಬ್ಬ ಅವರ ತಲೆ ಮತ್ತು ಮುಖಕ್ಕೆ ಹೊಲಿಗೆ ಹಾಕಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕೆ.ದಿನೇಶ್‍ಸುಬ್ಬ ಅವರು ನೀಲಾದ್ರಿ ನಗರದ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ 1ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅವರು ಹಲ್ಲೆಗೊಳಗಾದಾಗ ತಮ್ಮ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಬೆಂಗಳೂರಿನಲ್ಲೇ ನೆಲೆಸಿರುವ ಕೆ.ದಿನೇಶ್‍ಸುಬ್ಬ ಅವರ ಸಂಬಂಧಿ ದೀಪಕ್ ದೋರ್ಜಿ, ‘ಇದೊಂದು ಜನಾಂಗೀಯ ಹಲ್ಲೆ. ಆ.14ರಂದು ದಿನೇಶ್‍ನ ವಿವಾಹ ವಾರ್ಷಿಕೋತ್ಸವವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಕೆಲಸ ಮುಗಿದ ಬಳಿಕ ಆ.15ರ ರಾತ್ರಿ ತನ್ನ ಸಹೋದರ ಮತ್ತು ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ಮುಗಿಸಿ ಮನೆಗೆ ದೊಡ್ಡತೋಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈತನನ್ನು ನೋಡಿದ ಬೈಕಿನಲ್ಲಿ ಬಂದಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ‘ಚೈನೀಸ್, ಚೈನೀಸ್’ ಎಂದು ಕಿಚಾಯಿಸಿದ್ದಾರೆ. ಈ ವೇಳೆ ತಾನು ಭಾರತೀಯ, ಸಿಕ್ಕಿಂನವ ಎಂದು ಉತ್ತರಿಸಿದರೂ ಕೂಡ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.