15 ದಿನಗಳಲ್ಲಿ 78 ಗಂಟೆ ನಡೆದ ವಿಧಾನಸಭೆ ಅಧಿವೇಶನ: ಸ್ಪೀಕರ್ ಯು.ಟಿ.ಖಾದರ್

Update: 2023-07-21 13:29 GMT

ಬೆಂಗಳೂರು, ಜು.21: ಹದಿನಾರನೆ ವಿಧಾನಸಭೆಯ ಮೊದಲನೆ ಅಧಿವೇಶನದ ಮುಂದುವರೆದ ಉಪವೇಶನವು ಜು.3ರಿಂದ 21ರ ವರೆಗೆ ಒಟ್ಟು 15 ದಿನಗಳ ಕಾಲ ಸುಮಾರು 78 ಗಂಟೆ 35 ನಿಮಿಷಗಳ ಕಾಲ ಕಾರ್ಯ ಕಲಾಪ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಶುಕ್ರವಾರ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.3ರಂದು ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದಲ್ಲಿ 31 ಸದಸ್ಯರು ಒಟ್ಟು 12 ಗಂಟೆ 39 ನಿಮಿಷಗಳ ಕಾಲ ಭಾಗವಹಿಸಿದ್ದರು. ವಂದನಾ ನಿರ್ಣಯದ ಪ್ರಸ್ತಾವವನ್ನು ಜು.13ರಂದು ಅಂಗೀಕರಿಸಲಾಗಿದೆ ಎಂದರು.

2023-24ನೆ ಸಾಲಿನ ಆಯವ್ಯಯ ಅಂದಾಜುಗಳನ್ನು ಮುಖ್ಯಮಂತ್ರಿ ಜು.7ರಂದು ಮಂಡಿಸಿದರು. ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 62 ಸದಸ್ಯರು ಒಟ್ಟು 12 ಗಂಟೆ 52 ನಿಮಿಷಗಳ ಕಾಲ ಭಾಗವಹಿಸಿದ್ದರು. ಜು.20ರಂದು ಮುಖ್ಯಮಂತ್ರಿ ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು ಎಂದು ಸ್ಪೀಕರ್ ಹೇಳಿದರು.

ಈ ಅಧಿವೇಶನದಲ್ಲಿ ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರನ್ನಾಗಿ ರುದ್ರಪ್ಪ ಲಮಾಣಿಯವರನ್ನು ಚುನಾಯಿಸಲಾಗಿದೆ. ಅಲ್ಲದೇ, ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿಯನ್ನು (2023ರ ವರದಿ ಸಂಖ್ಯೆ-2) ಸದನದಲ್ಲಿ ಮಂಡಿಸಲಾಗಿದೆ. 15ನೆ ವಿಧಾನಸಭೆಯ 2021-22 ಹಾಗೂ 2022-23ನೆ ಸಾಲಿನ ಸರಕಾರಿ ಭರವಸೆಗಳ ಸಮಿತಿಯ ಹದಿನೈದನೆ ವರದಿ, 15ನೆ ವಿಧಾನಸಭೆಯ 2020-21ನೆ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ 12ನೆ ವಿಶೇಷ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ಹೇಳಿದರು.

ಒಟ್ಟು 29 ಅಧಿಸೂಚನೆಗಳು, 12 ಅಧ್ಯಾದೇಶಗಳು ಮತ್ತು 70 ವಾರ್ಷಿಕ ವರದಿಗಳು, 99 ಲೆಕ್ಕ ಪರಿಶೋಧನಾ ವರದಿಗಳು, 14 ಅನುಪಾಲನ ವರದಿಗಳು ಹಾಗೂ ಒಂದು ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವು ಸೇರಿದಂತೆ ಒಟ್ಟು 14 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ. ನಿಯಮ 60 ರಡಿಯಲ್ಲಿ ನೀಡಿದ್ದ 6 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಒಟ್ಟು 4 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.

ಒಟ್ಟು 1149 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 120 ಪ್ರಶ್ನೆಗಳ ಪೈಕಿ 120 ಪಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1013 ಪ್ರಶ್ನೆಗಳ ಪೈಕಿ 966 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 249 ಸೂಚನೆಗಳ ಪೈಕಿ 153 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಖಾದರ್ ಹೇಳಿದರು.

ಗಮನ ಸೆಳೆಯುವ 202 ಸೂಚನೆಗಳ ಪೈಕಿ 181 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 16 ಸೂಚನೆಗಳನ್ನು ಚರ್ಚಿಸಲಾಗಿದೆ. ವಿಧಾನ ಮಂಡಲದ, ವಿಧಾನಸಭೆಯ ವಿವಿಧ ಸಮಿತಿಗಳಿಗೆ, ವಿಧಾನಸಭೆಯ ನಿಯಮಾವಳಿ ಸಮಿತಿಗೆ, ರಾಜ್ಯ ಮುಕ್ತ ವಿವಿ, ವಿದ್ಯಾವಿಷಯಕ ಪರಿಷತ್ತಿಗೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಸೆನೆಟ್‍ಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸದನವು ಸಭಾಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಖಾದರ್ ಹೇಳಿದರು.

ಈ ಸದನದಲ್ಲಿ ಅಶಿಸ್ತು ಹಾಗೂ ಅಗೌರವದಿಂದ ವರ್ತಿಸಿದ ಹತ್ತು ಸದಸ್ಯರನ್ನು ಜು.19ರಂದು ಈ ಅಧಿವೇಶನ ಮುಕ್ತಾಯವಾಗುವವರೆಗೆ ಸದನಕ್ಕೆ ಬಾರದಂತೆ ಅತ್ಯಂತ ತಡೆಹಿಡಿಯಲಾಗಿದೆ (ಅಮಾನತ್ತುಗೊಳಿಸಲಾಗಿದೆ) ಎಂದು ಖಾದರ್ ಮಾಹಿತಿ ನೀಡಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News