ದೇವೇಗೌಡರಾದರೂ ಮಗನಿಗೆ ಬುದ್ದಿ ಹೇಳಿ ಜನರಿಂದ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಲಿ: HDK ಆರೋಪಕ್ಕೆ ಸಿಎಂ ತಿರುಗೇಟು
ಬೆಂಗಳೂರು: ''ಅಧಿಕಾರ ಇದ್ದಾಗ ಲಂಚ-ಕಮಿಷನ್ ವ್ಯವಹಾರದಲ್ಲಿ ಮೂರುಹೊತ್ತು ಮುಳುಗೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲದರಲ್ಲಿಯೂ ಲಂಚದ ವ್ಯವಹಾರಗಳೇ ಕಾಣಿಸುತ್ತಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಡಾ. ಯತೀಂದ್ರ ಅವರ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ತಮ್ಮ X ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ''ತಮ್ಮ ಪತ್ನಿ ಮತ್ತು ಮಗ ಕೂಡಾ ರಾಜಕೀಯ ಕ್ಷೇತ್ರದಲ್ಲಿದ್ದಾರೆ ಎನ್ನುವುದನ್ನು ಎಚ್.ಡಿ.ಕುಮಾರಸ್ವಾಮಿ ಮರೆತಂತಿದೆ. ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಅವರ ರೀತಿ ಅವರ ಪತ್ನಿ ಮತ್ತು ಮಗನ ಬಗ್ಗೆ ಮಾತನಾಡಲಾರೆ. ಕನಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾದರೂ ಮಗನಿಗೆ ಬುದ್ದಿ ಹೇಳಿ ರಾಜ್ಯದ ಜನರಿಂದ ಮಗ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಬೇಕೆಂದು ಕೋರುತ್ತೇನೆ'' ಎಂದು ಮನವಿ ಮಾಡಿಕೊಂಡಿದ್ದಾರೆ.
''ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆದಿರುವ ನನ್ನ ಮತ್ತು ನನ್ನಮಗನ ನಡುವಿನ ಪೋನ್ ಸಂಭಾಷಣೆಗೆ ವರ್ಗವಾವಣೆಯಲ್ಲಿ ವಸೂಲಿಯ ಕತೆ ಕಟ್ಟಿ ಕುಮಾರಸ್ವಾಮಿ ಕುಣಿದಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ಕ್ಷುಲಕ ನಡವಳಿಕೆ ಬಗ್ಗೆ ನಾನು ಕನಿಕರವನ್ನಷ್ಟೇ ವ್ಯಕ್ತಪಡಿಸಬಲ್ಲೆ'' ಎಂದು ಹೇಳಿದ್ದಾರೆ.
''ದುರುದ್ದೇಶದಿಂದ ಸುಳ್ಳು ಆರೋಪ''
''ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರೂ ಜನಸೇವೆಯಿಂದ ಹಿಂದೆ ಸರಿಯದ ಡಾ.ಯತೀಂದ್ರ ಅವರು ವರುಣ ಕ್ಷೇತ್ರದ ಅಭಿವೃದ್ದಿಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ ಎಚ್.ಡಿ ಕುಮಾರಸ್ವಾಮಿ ಅವರು ಪ್ರತಿನಿತ್ಯ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ'' ಎಂದು ಸಿದ್ದರಾಮಯ್ಯ ದೂರಿದ್ದಾರೆ.