ಉಡುಪಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನ: ಕೋಟ ಶ್ರೀನಿವಾಸ ಪೂಜಾರಿ ಆರೋಪ

Update: 2023-07-28 14:26 GMT

ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧ ಪೊಲೀಸರು ಮತ್ತು ಜಿಲ್ಲಾಡಳಿತದ ಕೈಯನ್ನು ಸರಕಾರ ಸಂಪೂರ್ಣ ಕಟ್ಟಿಹಾಕಿದೆ. ಇದನ್ನು ಮುಚ್ಚಿಹಾಕಲು ಸರಕಾರ ಮುಂದಾಗಿದೆ’ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದ್ದಾರೆ.

ಶುಕ್ರವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಐಡಿ ತನಿಖೆ ಅಥವಾ ಡಿಐಜಿ ಮಟ್ಟದ ಮಹಿಳಾ ಪೊಲೀಸ್ ಅಧಿಕಾರಿಯಿಂದ ತನಿಖೆ ಮಾಡಬೇಕಿತ್ತು. ಆದರೆ, ಇದನ್ನು ಮುಚ್ಚಿಹಾಕುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ದೂರಿದರು.

ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿವೆ. ಸಿಎಂ ಮತ್ತು ಗೃಹ ಸಚಿವರು ಬಹಳ ದಿನಗಳ ಕಾಲ ಜನರನ್ನು ವಂಚಿಸಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸಿಐಡಿಗೆ ಕೊಟ್ಟು ಕೂಲಂಕಷ ತನಿಖೆ ಮಾಡಿಸಿ. ಇದರ ಆರೋಪಿತರ ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದೆ ಇರುವ ಜಾಲ, ಭಯೋತ್ಪಾದನೆ ತಂಡದ ಸಾಧ್ಯತೆ ಅಥವಾ 'ಲವ್ ಜಿಹಾದ್' ಪ್ರಕರಣದ ಸಾಧ್ಯತೆ ಕುರಿತು ಪರಿಶೀಲಿಸಬೇಕಿದೆ ಎಂದು ಆಗ್ರಹಿಸಿದರು.

ಪ್ರತ್ಯೇಕ ಸಿಐಡಿ ತಂಡ ರಚಿಸಿ ತನಿಖೆಗೆ ಆದೇಶ ಕೊಡಬೇಕು. ಆದರೆ, ಇದರ ಬದಲಾಗಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು, ಯುವಕರ ಮೇಲೆ ಕೇಸು ಹಾಕುವ ಕೆಟ್ಟ ಪರಂಪರೆಗೆ ನಮ್ಮ ಗೃಹ ಇಲಾಖೆ ಹೊರಟಿದೆ. ಇದು ಎಲ್ಲಿಗೆ ಮುಟ್ಟಲಿದೆ ಎಂಬ ಆತಂಕ ಮೂಡಿದೆ. ತನಿಖೆಯನ್ನು ಎನ್‍ಐಎಗೆ ವಹಿಸಿ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News