ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ದುರಂತ: ಮಳಿಗೆ ಮಾಲಕನ ಬಂಧನ

Update: 2023-10-08 05:40 GMT

ಆನೇಕಲ್, ಅ.7: ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ದುರಂತದಲ್ಲಿ 13 ಮಂದಿಯ ಸಾವಿಗೆ ಕಾರಣವಾಗಿರುವ ಆರೋಪದಲ್ಲಿ ಗೋದಾಮಿನ ಮಾಲಕ ರಾಮಸ್ವಾಮಿ ರೆಡ್ಡಿ ಎಂಬವರ ಪುತ್ರ ನವೀನ್ ನನ್ನು ಬಂಧಿಸಲಾಗಿದೆ. ಘಟನೆಯ ಪ್ರತ್ಯಕ್ಷದರ್ಶಿ ಗಂಭೀರ ಗಾಯಾಳುವೊಬ್ಬರ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಐಜಿಪಿ (ಸೆಂಟ್ರಲ್ ರೇಂಜ್) ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ವಿರುದ್ಧ ಕೊಲೆಯಲ್ಲದ ನರಹತ್ಯೆ ಪ್ರಕರಣ ಹಾಗೂ ವಿಸ್ಫೋಟಕ ವಿದ್ವಂಸಕ ಕೃತ್ಯ ಪ್ರಕರಣ ದಾಖಲಿಸಲಾಗಿದೆ.

ಮಳಿಗೆ ಮಾಲಕ ಆರೋಪಿ ನವೀನ್ ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸ್ ನಿಗಾದಲ್ಲಿದ್ದಾನೆ ಎಂದು ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಮಾರಾಟ ಮಳಿಗೆಯಲ್ಲಿರಬೇಕಾದ ಪಟಾಕಿ ಸಂಗ್ರಹಣಾ ಮಿತಿ ಹೆಚ್ಚಿದ್ದು, ಅಕ್ರಮ ದಾಸ್ತಾನು, ನಿಯಮ ಉಲ್ಲಂಘನೆಯೇ ಘಟನೆಗೆ ಕಾರಣ ಎಂದೆನ್ನಲಾಗಿದೆ ಎಂದು ತಿಳಿಸಿದ್ದಾರೆ.

ಎರಡು ಪ್ರತ್ಯೇಕ ತಂಡ ರಚನೆ: ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಒಂದು ತಂಡ ರಚನೆಯಾದರೆ ಮತ್ತೊಂದು ತಂಡ ನುರಿತ ಪರಿಣಿತರಿಗೆ ಸಹಕರಿಸಿ ತನಿಖೆಗೆ ಸಹಕರಿಸಲು ನಿಯೋಜಿಸಲಾಗಿದೆ ಎಂದರು.

ಪಟಾಕಿಯನ್ನು ಟ್ರಕ್ ನಿಂದ ಅನ್ಲೋಡ್ ಮಾಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ಇಡೀ ಮಾರಾಟದ ಅಂಗಡಿ, ಅಂಗಡಿಗೆ ಹೊಂದಿಕೊಂಡಂತಿರುವ ದಾಸ್ತಾನು ಮಳಿಗೆಗೂ ಬೆಂಕಿ ವ್ಯಾಪಿಸಿದ್ದರಿಂದ ಹದಿಮೂರು ಮಂದಿ ಸಜೀವ ದಹನವಾಗಿದ್ದಾರೆ. ಏಳು ಮಂದಿ ಗಾಯಾಳುಗಳಾಗಿದ್ದು, ಈ ಪೈಕಿ ವೆಂಕಟೇಶ್ ಎನ್ನುವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂದು ಡಿಜಿ ರವಿಕಾಂತೇಗೌಡ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News